ADVERTISEMENT

ರಸ್ತೆಯಲ್ಲಿ ಯುವಕರ ಹೊಡೆದಾಟ: ಹಲ್ಲೆ ನಡೆಸಿ ರಂಪಾಟ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:38 IST
Last Updated 22 ನವೆಂಬರ್ 2022, 21:38 IST
ಕೋರಮಂಗಲದಲ್ಲಿ ಯುವಕರಿಬ್ಬರು ಮಂಗಳವಾರ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲ್ಲೆಗೀಡಾದ ಯುವಕನ ಮೈ ಮೇಲೆ ಕುಳಿತಿದ್ದ ಮತ್ತೊಬ್ಬ ಯುವಕ ಸ್ಥಳೀಯರ ಜೊತೆ ವಾಗ್ವಾದ ನಡೆಸಿ ಬೆದರಿಕೆ ಹಾಕಿದರು – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಕೋರಮಂಗಲದಲ್ಲಿ ಯುವಕರಿಬ್ಬರು ಮಂಗಳವಾರ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲ್ಲೆಗೀಡಾದ ಯುವಕನ ಮೈ ಮೇಲೆ ಕುಳಿತಿದ್ದ ಮತ್ತೊಬ್ಬ ಯುವಕ ಸ್ಥಳೀಯರ ಜೊತೆ ವಾಗ್ವಾದ ನಡೆಸಿ ಬೆದರಿಕೆ ಹಾಕಿದರು – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಯುವಕರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ತೀವ್ರ ಗಾಯಗೊಂಡಿರುವ ಯುವಕರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸ್ಥಳೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕರಿಬ್ಬರು, ಮಂಗಳವಾರ ಸಂಜೆ ರಸ್ತೆಯಲ್ಲಿ ಪರಸ್ಪರ ಗಲಾಟೆ ಮಾಡುತ್ತಿದ್ದರು. ಸ್ಥಳಕ್ಕೆ ಹೋದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರತ್ಯಕ್ಷದರ್ಶಿಯೊಬ್ಬರು, ‘ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಶುರುವಾಗಿತ್ತು. ಇದು ವಿಕೋಪಕ್ಕೆ ಹೋಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಒಬ್ಬಾತ, ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದ. ಮೈ ಮೇಲೆ ಕುಳಿತು ಕೂಗಾಡುತ್ತಿದ್ದ. ಬುದ್ದಿವಾದ ಹೇಳಲು ಹೋದ ಜನರ ಮೇಲೂ ಹರಿಹಾಯುತ್ತಿದ್ದ’ ಎಂದರು.

ADVERTISEMENT

‘ಯುವಕರ ಬಳಿ ಹರಿತವಾದ ಆಯುಧಗಳಿರುವ ಅನುಮಾನವಿದೆ. ಹೀಗಾಗಿ, ಯಾರೂ ಹತ್ತಿರಕ್ಕೆ ಹೋಗಿ ಹಿಡಿದುಕೊಳ್ಳಲು ಯತ್ನಿಸಲಿಲ್ಲ. ಯಾವ ಕಾರಣಕ್ಕೆ ಇಬ್ಬರು ಯುವಕರು ಹೊಡೆದಾಡುತ್ತಿದ್ದರೆಂಬುದು ಗೊತ್ತಾಗಿಲ್ಲ’ ಎಂದು ಹೇಳಿದರು.

‘ಪೊಲೀಸರು ಸ್ಥಳಕ್ಕೆ ಬಂದಾಗ, ಯುವಕ ‍ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದರ ವಿಡಿಯೊವನ್ನು ಪೊಲೀಸರು ಚಿತ್ರೀಕರಿಸಿಕೊಂಡಿದ್ದಾರೆ. ಕುಡಿದ ಅಮಲಿನಲ್ಲಾದ ಗಲಾಟೆಯೂ ಅಥವಾ ಬೇರೆ ಉದ್ದೇಶವಿದೆಯಾ? ಎಂಬುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ. ನಡುರಸ್ತೆಯಲ್ಲಿ ಯುವಕರು ಹೊಡೆದಾಡಿಕೊಂಡಿದ್ದರಿಂದ, ಸ್ಥಳೀಯರು ಆತಂಕಗೊಂಡಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.