ಬೆಂಗಳೂರು: ಕೋರಮಂಗಲದ ವಿ.ಆರ್.ಬಡಾವಣೆಯ ಭಾರ್ಗವಿ ಮಹಿಳಾ ಪೇಯಿಂಗ್ ಗೆಸ್ಟ್‌ಗೆ(ಪಿ.ಜಿ) ಜುಲೈ 23ರಂದು ನುಗ್ಗಿ ಬಿಹಾರದ ಯುವತಿ ಕೃತಿ ಕುಮಾರ್ (23) ಅವರ ಕತ್ತು ಸೀಳಿ ಹತ್ಯೆ ಮಾಡಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕೋರಮಂಗಲ ಠಾಣೆ ಪೊಲೀಸರು, 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
1,205 ಪುಟಗಳು ಹಾಗೂ 85 ಸಾಕ್ಷಿದಾರರ ಹೇಳಿಕೆ ಒಳಗೊಂಡ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿತ್ತು. 40 ದಿನಗಳ ಒಳಗೆ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 26ರಂದು ಆರೋಪಿ ಅಭಿಷೇಕ್‌ನನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧಿಸಲಾಗಿತ್ತು.
‘ಆರೋಪಿಯ ಸ್ವಂತ ಊರು ಮಧ್ಯಪ್ರದೇಶದ ಬೇಗಂಗಂಜ್. ಕೃತ್ಯ ನಡೆಸಿದ ಬಳಿಕ ರೈಲಿನ ಮೂಲಕ ಸ್ವಂತ ಗ್ರಾಮಕ್ಕೆ ತೆರಳುತ್ತಿದ್ದ. ಭೋಪಾಲ್‌ನಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ತನ್ನ ಪ್ರೇಯಸಿ ದೂರವಾಗಲು ಕೃತಿಕುಮಾರಿ ಅವರೇ ಕಾರಣವೆಂದು ಅನುಮಾನಗೊಂಡು ಕೊಲೆ ಮಾಡಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ’ ಎಂದು ಪೊಲೀಸರು ಹೇಳಿದರು.
ಆರೋಪಿ ಅಭಿಷೇಕ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ ಅವರ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಕೃತಿ ಕುಮಾರಿ ನೆಲೆಸಿದ್ದ ಪಿ.ಜಿಯಲ್ಲೇ ಆರೋಪಿಯ ಪ್ರೇಯಿಸಿಯೂ ನೆಲೆಸಿದ್ದರು. ಇತ್ತೀಚೆಗೆ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಅಭಿಷೇಕ್ ಯಾವುದೇ ಕೆಲಸಕ್ಕೆ ತೆರಳುತ್ತಿರಲಿಲ್ಲ. ಕೆಲಸಕ್ಕೆ ಸೇರುವಂತೆ ಪ್ರೇಯಸಿ ಹೇಳಿದ್ದರೂ ಕೇಳಿರಲಿಲ್ಲ. ಆದರೆ, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದಾಗಿ ಅಭಿಷೇಕ್ ಸುಳ್ಳು ಹೇಳಿಕೊಂಡು ಓಡಾಟ ನಡೆಸುತ್ತಿದ್ದ. ಈ ವಿಚಾರ ಪ್ರಿಯತಮೆಗೆ ಗೊತ್ತಾಗಿತ್ತು. ಹೀಗಾಗಿ ಆತನ ಪ್ರೇಯಸಿ ಅಭಿಷೇಕ್‌ನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು. ಅಭಿಷೇಕ್‌ನಿಂದ ದೂರವಾಗುವಂತೆ ಕೃತಿ ಕುಮಾರಿ ಸಹ ಸಲಹೆ ನೀಡಿದ್ದರು. ಪ್ರೇಯಸಿ ದೂರವಾಗುವುದಕ್ಕೆ ಕೃತಿ ಕುಮಾರಿ ಅವರೇ ಕಾರಣವೆಂದು ಭಾವಿಸಿ ಆರೋಪಿ ಪಿ.ಜಿಗೆ ನುಗ್ಗಿ ಕೊಲೆ ಮಾಡಿ ಹೊರರಾಜ್ಯಕ್ಕೆ ಪರಾರಿಯಾಗಿದ್ದ ಎಂಬುದಾಗಿ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.