ADVERTISEMENT

ನನ್ನ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿದ್ದರೆ ತನಿಖೆ ನಡೆಸಲಿ: ಶ್ರೀನಿವಾಸ ಪೂಜಾರಿ

ತಮ್ಮ ವಿರುದ್ಧದ ಆರೋಪಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 16:29 IST
Last Updated 8 ಜೂನ್ 2024, 16:29 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ‘ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಸಿದ್ದರೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಲಿ. ರಾಜಕೀಯಕ್ಕಾಗಿ ಆಧಾರರಹಿತ ಆರೋಪ ಮಾಡುವುದು ಬೇಡ’ ಎಂದು ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಬೋವಿ ಅಭಿವೃದ್ಧಿ ನಿಗಮದಲ್ಲಿ ₹ 100 ಕೋಟಿ ಅಕ್ರಮ ನಡೆದಿದೆ’ ಎಂಬ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಆರೋಪದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಆರೋಪ ಮಾಡುವವರ ಬಳಿ ಆಧಾರಗಳು ಇದ್ದರೆ ಸಮಗ್ರವಾಗಿ ತನಿಖೆ ನಡೆಸಲು ಅನುಕೂಲವಾಗುವಂತೆ ದಾಖಲೆಗಳನ್ನು ಸರ್ಕಾರಕ್ಕೆ ಕೊಡಲಿ’ ಎಂದರು.

‘ಸಮಾಜ ಕಲ್ಯಾಣ ಸಚಿವನಾದ ತಕ್ಷಣವೇ ಇಲಾಖೆ ವ್ಯಾಪ್ತಿಯ ನಿಗಮದಲ್ಲಿ ಅವ್ಯವಹಾರ ನಡೆದಿರುವ ಮಾಹಿತಿ ದೊರಕಿತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದೆ. ಬಿಜೆಪಿ ಅಧಿಕಾರದಿಂದ ಇಳಿದು ಒಂದು ವರ್ಷವಾಯಿತು. ಈವರೆಗೂ ತನಿಖೆ ಏನಾಗಿದೆ ಎಂಬುದು ಗೊತ್ತಿಲ್ಲ. ಅಕ್ರಮದಲ್ಲಿ ನನ್ನ ಪಾತ್ರ ಇರುವುದು ಕಂಡುಬಂದರೆ ನನ್ನನ್ನೂ ತನಿಖೆಗೆ ಒಳಪಡಿಸಲಿ’ ಎಂದು ಹೇಳಿದರು.

ADVERTISEMENT

‘ಗೂಳಿಹಟ್ಟಿ ಶೇಖರ್‌ ಯಾವ ಕಾರಣಕ್ಕೆ ಆರೋಪ ಮಾಡಿದ್ದಾರೊ ಗೊತ್ತಿಲ್ಲ. ಈಗ ಅವರು ನಿರಾಧಾರ ಆರೋಪ ಮಾಡಿರುವುದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಗರಣದಲ್ಲಿ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ನನ್ನ ಹೆಸರನ್ನು ಎಳೆದು ತಂದು ದಿಕ್ಕು ತಪ್ಪಿಸಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ’ ಎಂದರು.

‘ಹಿಂದೆಯೂ ಇದೇ ರೀತಿ ನನ್ನ ತೇಜೋವಧೆ ಯತ್ನ ನಡೆದಿತ್ತು. ₹ 63 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದೇನೆ ಎಂಬ ಸುಳ್ಳು ಆರೋಪ ಮಾಡಿದ್ದರು. ನಾನೇ ಲೋಕಾಯುಕ್ತರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದೆ. ತನಿಖೆ ನಡೆಸಿದ ಲೋಕಾಯುಕ್ತರು, ನನ್ನ ಬಳಿ ಇರುವುದು ₹3.5 ಕೋಟಿ ಮೌಲ್ಯದ ಆಸ್ತಿ ಮಾತ್ರ ಎಂಬ ಪ್ರಮಾಣಪತ್ರ ನೀಡಿದ್ದರು. ಅದು ಈಗಲೂ ನನ್ನ ಬಳಿ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.