ಬೆಂಗಳೂರು: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಅಕ್ರಮವಾಗಿ ಸಂಗ್ರಹಿಸಿರುವ ₹1 ಸಾವಿರ ಕೋಟಿಯನ್ನು ಜಪ್ತಿ ಮಾಡಿಕೊಂಡು, ಹಣ ಸಂಗ್ರಹಿಸಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದ ನಿಯೋಗವು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಸೋಮವಾರ ರಾತ್ರಿ ದೂರು ಸಲ್ಲಿಸಿದೆ.
‘ಕೆಪಿಸಿಸಿ ಸಲ್ಲಿಸಿರುವ ದೂರನ್ನು ಸ್ವೀಕರಿಸಲಾಗಿದೆ. ಸದ್ಯ ಯಾರ ವಿರುದ್ಧವೂ ಎಫ್‌ಐಆರ್ ದಾಖಲಾಗಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಬಿ.ಪಿ.ಹರೀಶ್ ಹಾಗೂ ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಪ್ರತಾಪ ಸಿಂಹ ಸೇರಿದಂತೆ ಹಲವರು ದಾವಣಗೆರೆಯ ಜಿಎಂಐಟಿಯಲ್ಲಿ ಸಭೆ ನಡೆಸಿದ್ದರು. ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ರಾಜ್ಯದ ನಮ್ಮ ಪಕ್ಷದ ನಾಯಕರು ₹1 ಸಾವಿರ ಕೋಟಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಆ ಹಣ ಬಳಸಿ ರಾಜ್ಯ ಸರ್ಕಾರವನ್ನು ಪತನಗೊಳಿಸಿ, ತಾವು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಆ ಹಣವನ್ನು ಬಳಸಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಸಂಚು ರೂಪಿಸಿದ್ದಾರೆ. ಅಲ್ಲದೇ ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ ಎಂದೂ ಹೇಳಿಕೆ ಕೊಟ್ಟಿದ್ದಾರೆ. ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ ನೋಟು ಎಣಿಕೆ ಯಂತ್ರವೂ ಪತ್ತೆಯಾಗಿತ್ತು’ ಎಂದು ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಸಭೆಯಲ್ಲಿ ಇದ್ದವರಿಗೆ ಈ ಬಗ್ಗೆ ಖಚಿತ ಮಾಹಿತಿ ಇದ್ದುದ್ದರಿಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ರಾಜ್ಯದ ಜನರು ಕಾಂಗ್ರೆಸ್‌ಗೆ 135 ಸ್ಥಾನ ನೀಡಿ ಐದು ವರ್ಷಗಳ ಕಾಲ ಸರ್ಕಾರ ನಡೆಸಲು ಜನಾದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತ ನಡೆಸುತ್ತಿದೆ. ಅಧಿಕಾರವಿಲ್ಲದೇ ಹತಾಶೆಗೊಂಡಿರುವ ಬಿಜೆಪಿಯ ಕೆಲವು ನಾಯಕರು, ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸಿದ್ದಾರೆ. ರಾಜ್ಯ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿರುವುದು ಯತ್ನಾಳ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಸಂಚು ರೂಪಿಸಿದ ಮುಖಂಡರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು‘ ಎಂದು ದೂರಿನಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.