ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಸಹಾಯಕ ಎಂಜಿನಿಯರ್ ಸೇರಿದಂತೆ 622 ಹುದ್ದೆಗಳಿಗೆ ನಡೆಸಿದ್ದ ಮರು ಪರೀಕ್ಷೆಯೂ ವಿವಾದಕ್ಕೆ ಒಳಗಾಗಿದೆ.
ನೇಮಕಾತಿ ಅಧಿಸೂಚನೆಗೆ ವಿರುದ್ಧವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಋಣಾತ್ಮಕ ಅಂಕಗಳ ಪದ್ಧತಿ ಅನುಸರಿಸಿರುವುದಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಯು ಸರಿ ಉತ್ತರಗಳಿಂದ ಪಡೆದ ಒಟ್ಟು ಅಂಕಗಳಲ್ಲಿ ಆತ ಮಾಡಿದ ತಪ್ಪು ಉತ್ತರಗಳನ್ನು ಲೆಕ್ಕಹಾಕಿ ಪ್ರತಿ ಮೂರು ತಪ್ಪು ಉತ್ತರಕ್ಕೆ ಒಂದು ಅಂಕದಂತೆ ಕಡಿತ ಮಾಡಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಫೆಬ್ರುವರಿಯಲ್ಲಿ 100 ಅಂಕಗಳಿಗೆ ನಡೆಸಿದ್ದ ಮರು ಪರೀಕ್ಷೆಯಲ್ಲಿ ಇದೇ ವಿಧಾನ ಅನುಸರಿಸಲಾಗಿದೆ. ಇದರಿಂದ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಕೆಪಿಸಿಎಲ್‌ನಲ್ಲಿ ಖಾಲಿ ಇದ್ದ ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಮೆಕ್ಯಾನಿಕಲ್ ವಿಭಾಗಗಳ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ರಸಾಯನಶಾಸ್ತ್ರಜ್ಞ, ರಾಸಾಯನಿಕ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಜುಲೈ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳ ಪಟ್ಟಿ ನೀಡುವ ಹೊಣೆಗಾರಿಕೆಯನ್ನು ಕೆಇಎಗೆ ನೀಡಲಾಗಿತ್ತು.
ಕೆಇಎ 2018ರ ಜನವರಿಯಲ್ಲಿ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಕಲಬುರಗಿ, ಮೈಸೂರು ಹಾಗೂ ಶಿವಮೊಗ್ಗದ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಪ್ರಶ್ನೆಪತ್ರಿಕೆಗಳ ಸೋರಿಕೆ, ಕೆಲ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮತ್ತಿತರ ಪರೀಕ್ಷಾ ಅಕ್ರಮ ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ 2018ರಲ್ಲಿ ನಡೆಸಿದ್ದ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು. ನಾಲ್ಕು ತಿಂಗಳ ಹಿಂದಷ್ಟೇ ಮರುಪರೀಕ್ಷೆ ನಡೆಸಲಾಗಿತ್ತು.
‘ಕೆಪಿಸಿಎಲ್ ಹೊರಡಿಸಿದ್ದ ನೇಮಕಾತಿ ಅಧಿಸೂಚನೆ, ಸುತ್ತೋಲೆ, ಕೆಇಎ ಮಾರ್ಗಸೂಚಿ ಸೇರಿದಂತೆ ಎಲ್ಲೂ ಋಣಾತ್ಮಕ ಅಂಕ ಪದ್ಧತಿ ಅನುಸರಿಸುವ ಕುರಿತು ಮಾಹಿತಿ ನೀಡಿಲ್ಲ. 2018ರಲ್ಲಿ ನಡೆದಿದ್ದ ಪರೀಕ್ಷೆಯ ಒಎಂಆರ್ ಶೀಟ್, ಪ್ರವೇಶ ಪತ್ರದ ಸೂಚನೆಯಲ್ಲಿ ಋಣಾತ್ಮಕ ಅಂಕ ಪದ್ಧತಿ ಕುರಿತು ಮಾಹಿತಿ ನೀಡಲಾಗಿತ್ತು. ಅಧಿಸೂಚನೆಯ ಪ್ರಕಾರ ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೆ ಪರೀಕ್ಷೆಯನ್ನೇ ಕೋರ್ಟ್ ರದ್ದು ಮಾಡಿದ್ದರಿಂದ ಸುಮ್ಮನಾದೆವು. ಮರು ಪರೀಕ್ಷೆಗೆ ಹೊರಡಿಸಿದ ಅಧಿಸೂಚನೆ, ಒಎಂಆರ್ ಶೀಟ್, ಪ್ರವೇಶ ಪತ್ರ, ಮಾರ್ಗಸೂಚಿಯಲ್ಲೂ ಮಾಹಿತಿ ನೀಡಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಗಳ ಪಟ್ಟಿ ಪ್ರಕಟಿಸಿದಾಗಲೇ ಎಲ್ಲರಿಗೂ ಗೊತ್ತಾಯಿತು’ ಎನ್ನುತ್ತಾರೆ ಅಭ್ಯರ್ಥಿ ಶರಣ ಬಸು ಸೊನ್ನ.
‘ನೇಮಕಾತಿಗೆ 2017ರಲ್ಲಿ ಅಧಿಸೂಚನೆ ಹೊರಡಿಸಿದ ನಂತರ ಋಣಾತ್ಮಕ ಅಂಕ ಪದ್ಧತಿ ಅನುಸರಿಸುವ ಕುರಿತು ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಆದರೆ, ಮರು ಪರೀಕ್ಷೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಕಾನೂನು ಇಲಾಖೆಯಿಂದ ಸ್ಪಷ್ಟೀಕರಣ ಕೋರಿದ್ದೇವೆ. ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮಕ್ಕೆ ಕೆಇಎಗೆ ಪತ್ರ ಬರೆಯಲಾಗುವುದು’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಪಿಸಿಎಲ್ ಹಿರಿಯ ಅಧಿಕಾರಿ.
ನೇಮಕಾತಿ ಅಧಿಸೂಚನೆ;2017 ಮೊದಲ ಪರೀಕ್ಷೆ;2018 ಮರು ಪರೀಕ್ಷೆ;2024
ಋಣಾತ್ಮಕ ಅಂಕಗಳಿಗೆ ಅಭ್ಯರ್ಥಿಗಳಿಂದಲೇ ಪರ–ವಿರೋಧ ವ್ಯಕ್ತವಾಗಿದೆ. ಸ್ಪಷ್ಟನೆ ಕೋರಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಅವರಿಂದ ಉತ್ತರ ಬಂದ ನಂತರ ನಿರ್ಧಾರ ಕೈಗೊಳ್ಳಲಾಗುವುದು.-ಎಚ್.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ.
ಪ್ರಮಾದ ತಮ್ಮದಲ್ಲ ಎಂದು ಕೆಇಎ–ಕೆಪಿಸಿಎಲ್ ನುಳುಚಿಕೊಳ್ಳುತ್ತಿವೆ. ಸರ್ಕಾರ ಮಧ್ಯ ಪ್ರವೇಶಿಸಬೇಕು. ಅಭ್ಯರ್ಥಿಗಳಿಗೆ ನ್ಯಾಯಕೊಡಿಸಬೇಕು.–ಗೋವಿಂದ ರಾಥೋಡ್, ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.