ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್ (ಎಇ) 660 ಹುದ್ದೆಗೆ 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಪಾರದರ್ಶಕ ರೀತಿಯಲ್ಲಿ ನಡೆಸಿದ್ದೇವೆ. ಯಾವುದೇ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ಅಂಕ ಅಥವಾ ಇತರ ವೈಯಕ್ತಿಕ ವಿವರಗಳನ್ನು ಸಂದರ್ಶನ ಪ್ರಕ್ರಿಯೆಯಲ್ಲಿ ಆಯೋಗದ ಸದಸ್ಯರು ಅಥವಾ ತಜ್ಞರಿಗೆ ಬಹಿರಂಗಪಡಿಸಿಲ್ಲ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಗೆ ಸಂದರ್ಶನದಲ್ಲಿ ಹೆಚ್ಚು ಅಂಕ, ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನಲ್ಲಿ ಕಡಿಮೆ ಅಂಕ ಬಂದಿರುವ ಬಗ್ಗೆ ಹುದ್ದೆ ವಂಚಿತ ಅಭ್ಯರ್ಥಿಗಳ ಅನುಮಾನಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ನೇಮಕಾತಿ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ನಿಗಾ ವಹಿಸಲು ಆಯೋಗ ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ನಿವೃತ್ತ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು, ಕುಲಪತಿಗಳು, ಮುಖ್ಯ ಎಂಜಿನಿಯರ್‌ಗಳು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ವಿಷಯತಜ್ಞರನ್ನಾಗಿ ಆಹ್ವಾನಿಸಲಾಗಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.