ಕೆ.ಆರ್.ಪುರ: ಇಲ್ಲಿನ ಕೆ.ಆರ್.ಪುರ ಮಾರುಕಟ್ಟೆಯಲ್ಲಿ ಸುಂಕ ವಸೂಲಾತಿಗೆ ಟೆಂಡರ್ ಗುತ್ತಿಗೆ ಪಡೆದವರು ಗಡಿ ಮೀರಿ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ನೂರಾರು ಕಾರ್ಯಕರ್ತರು ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪುರ ಮಾರುಕಟ್ಟೆಯ ಟೆಂಡರ್ ಅವಧಿ ಮುಗಿದ ನಂತರ ಹೊಸದಾಗಿ 1 ಎಕರೆ 14 ಗುಂಟೆ ವ್ಯಾಪ್ತಿಯಲ್ಲಿ ಸುಂಕ ವಸೂಲಾತಿಗೆ ಇ-ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪಡೆದ ಗುತ್ತಿಗೆದಾರ ಅಂಜನ್ ಮೂರ್ತಿ ಎಂಬುವವರು ವ್ಯಾಪ್ತಿ ಮೀರಿ ಹೆಚ್ಚುವರಿ ಪ್ರದೇಶದಲ್ಲಿ ಸುಂಕ ವಸೂಲಾತಿ ಮಾಡುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಆರೋಪಿಸಿದರು.
ಹೆಚ್ಚಿನ ಸುಂಕ ವಸೂಲಾತಿ ಸಂಬಂಧ ಸಹಾಯಕ ಪೋಲಿಸ್ ಆಯುಕ್ತರು, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ಸಮ್ಮುಖದಲ್ಲಿ ಸಭೆ ನಡೆಸಿ ಗುತ್ತಿಗೆದಾರರಾದ ಅಂಜನ್ ಮೂರ್ತಿಯವರಿಗೆ ಟೆಂಡರ್ ಪಡೆದಿರುವಷ್ಟು ವ್ಯಾಪ್ತಿಯಲ್ಲಷ್ಟೇ ಸುಂಕ ವಸೂಲಾತಿ ಮಾಡುವಂತೆ ಆದೇಶಿಸಿದ್ದರು. ನಂತರ, ಮೂರು ದಿನಗಳಲ್ಲಿ ಗಡಿ ಗುರುತಿಸಿ ಕೊಡುತ್ತೇವೆ ಎಂದೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರವಸೆ ನೀಡಿದ್ದರು. ಈವರೆಗೂ ಗಡಿ ಗುರುತಿಸಿಲ್ಲ ಎಂದು ದೂರಿದರು.
’ಗಡಿ ಗುರುತಿಸದಿದ್ದರಿಂದ, ಸಂತೆ ಮೈದಾನ ಮತ್ತು ಐಟಿಐ ಗೇಟ್‌ನಿಂದ ವೆಂಗಯ್ಯನ ಕೆರೆಯವರೆಗೂ(ಅರ್ಧ ಕಿಮೀವರೆಗೂ) ಕೆಲವರು ಅಕ್ರಮ ಸುಂಕ ವಸೂಲಿಗೆ ಇಳಿದಿದ್ದಾರೆ. ಕೆಲವು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಪುಂಡರು ದೌರ್ಜನ್ಯ ದಬ್ಬಾಳಿಕೆಯಿಂದ ರೈತರು ವ್ಯಾಪಾರಸ್ಥರಲ್ಲಿ ಹಫ್ತಾ ವಸೂಲಿಗೆ ಇಳಿದಿದ್ದಾರೆ. ಈ ಬಗ್ಗೆ ಪೋಲಿಸ್ ಠಾಣೆಗೆ ದೂರು ನೀಡಿದರೆ, ಪೊಲೀಸರು, ಬಿಬಿಎಂಪಿಯವರು ನಮಗೆ ಪತ್ರ ಬರೆದರೆ ಮಾತ್ರ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ’ ಎಂದು ಆರೋಪಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಿಬಿಎಂಪಿ ಮಹದೇವಪುರ ವಲಯ ಆಯುಕ್ತ ರಮೇಶ್, ’ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ವಸೂಲಾತಿ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಸುಂಕ ವಸೂಲಾತಿಗೆ ಸಂಬಂಧಿಸಿದಂತೆ ಸುಮಾರು 5 ಎಕರೆ ಜಾಗದಲ್ಲಿ 1 ಎಕರೆ 14 ಗುಂಟೆ ಜಾಗಕ್ಕೆ ಟೆಂಡರ್ ನೀಡಲಾಗಿದೆ. ತಹಶೀಲ್ದಾರ್, ಎಡಿಎಲ್‌ಆರ್‌ಗೂ ಪತ್ರ ಬರೆಯಲಾಗಿದೆ ನಾಲ್ಕೈದು ದಿನಗಳ ಒಳಗೆ ಬೌಂಡರಿ ಗುರುತಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.