ಕೆ.ಆರ್.ಪುರ: ಗುಂಡಿಗಳಿಂದ ತುಂಬಿರುವ ವರ್ತೂರು –ಹಲಸಹಳ್ಳಿ –ಸರ್ಜಾಪುರ ಮುಖ್ಯ ರಸ್ತೆಯನ್ನು ತಕ್ಷಣವೇ ದುರಸ್ತಿಪಡಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ವರ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.
ವರ್ತೂರು ಮೂಲಕ ಸರ್ಜಾಪುರ ಕಡೆಗೆ ಹಾದುಹೋಗುವ ಈ ಮುಖ್ಯರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳು ಬಿದ್ದಿದೆ. ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿರುವುದರಿಂದ, ಹಲವು ಬಾರಿ ಅಪಘಾತಗಳು ಸಂಭವಿಸಿವೆ ಎಂದು ಪ್ರತಿಭಟನಾಕಾರರು ದೂರಿದರು.
ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೆರೆಯಂತಾಗಿದೆ. ಡಾಂಬರೀಕರಣ ಕಿತ್ತುಹೋಗಿದ್ದು, ಅಘಾತಕ್ಕೆ ಎಡೆಮಾಡಿಕೊಡುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು
ಸ್ವಾಭಿಮಾನಿ ಬಳಗದ ಅಧ್ಯಕ್ಷ ಕುಪ್ಪಿ ಮಂಜುನಾಥ ದೂರಿದರು.
ರಸ್ತೆ ದುರಸ್ತಿ ವಿಷಯವನ್ನು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಡಾಂಬರೀಕರಣ ಮಾಡುವ ಮೊದಲು ಚರಂಡಿ ಮಾಡದೆ, ಕಾಟಾಚಾರಕ್ಕೆ ರಸ್ತೆ ಡಾಂಬರರೀಕರಣ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವರ್ತೂರು, ಹಲಸಹಳ್ಳಿ ಹಾಗೂ ಸ್ವಾಭಿಮಾನಿ ಬಳಗದ ಸದಸ್ಯರು ಪ್ರತಿಭಟನೆಗೆ ಕೈಜೋಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.