ADVERTISEMENT

Krishi Mela 2023 | ಕೃಷಿ ಮೇಳಕ್ಕೆ ತೆರೆ, 4 ದಿನಗಳಲ್ಲಿ 15 ಲಕ್ಷ ಜನರ ಭೇಟಿ

* ಕೋಟಿ ವಹಿವಾಟು

ಬಾಲಕೃಷ್ಣ ಪಿ.ಎಚ್‌
Published 21 ನವೆಂಬರ್ 2023, 0:10 IST
Last Updated 21 ನವೆಂಬರ್ 2023, 0:10 IST
<div class="paragraphs"><p>ಸಾಧಕ ಕೃಷಿಕರಾದ ವಿ.ರೂಪ (ಕೋಲಾರ ಜಿಲ್ಲೆ), ಆರ್. ಸ್ವಾತಿ (ಚಿಕ್ಕಬಳ್ಳಾಪುರ ಜಿಲ್ಲೆ), ಟಿ.ಎನ್. ರವಿ (ಕೋಲಾರ ಜಿಲ್ಲೆ), ಡಿ.ಕೆ. ಚಂದ್ರಪ್ಪ (ಚಿಕ್ಕಬಳ್ಳಾಪುರ ಜಿಲ್ಲೆ) ಅವರನ್ನು&nbsp;ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಸೋಮವಾರ ನಡೆದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.&nbsp;&nbsp;</p></div>

ಸಾಧಕ ಕೃಷಿಕರಾದ ವಿ.ರೂಪ (ಕೋಲಾರ ಜಿಲ್ಲೆ), ಆರ್. ಸ್ವಾತಿ (ಚಿಕ್ಕಬಳ್ಳಾಪುರ ಜಿಲ್ಲೆ), ಟಿ.ಎನ್. ರವಿ (ಕೋಲಾರ ಜಿಲ್ಲೆ), ಡಿ.ಕೆ. ಚಂದ್ರಪ್ಪ (ಚಿಕ್ಕಬಳ್ಳಾಪುರ ಜಿಲ್ಲೆ) ಅವರನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಸೋಮವಾರ ನಡೆದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

   

ಬೆಂಗಳೂರು: ನೂರಾರು ಮಳಿಗೆಗಳು, ಸಾವಿರಾರು ಬಗೆಯ ಪ್ರದರ್ಶನಗಳು, ಲಕ್ಷಾಂತರ ಮಂದಿ ನೋಡುಗರಿಂದ ತುಂಬಿ ಹೋಗಿದ್ದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಸೋಮವಾರ ತೆರೆ ಬಿತ್ತು. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಕೃಷಿ ಮೇಳದಲ್ಲಿ ನಾಲ್ಕು ದಿನಗಳಲ್ಲಿ ಒಟ್ಟು 15.67 ಲಕ್ಷ ರೈತರು, ವಿದ್ಯಾರ್ಥಿಗಳು, ಕೃಷಿ ಆಸಕ್ತರು ಭೇಟಿ ನೀಡಿದ್ದರು. ವಿವಿಧ ಮಳಿಗೆಗಳಲ್ಲಿ ₹ 5.28 ಕೋಟಿ ವಹಿವಾಟು ನಡೆಯಿತು.

ADVERTISEMENT

ಬೆಲ್ಲದ ಪರಿಷೆ: ಆರೋಗ್ಯಕ್ಕೆ ಸಕ್ಕರೆಗಿಂತ ಒಳ್ಳೆಯದಾಗಿರುವ ಬೆಲ್ಲದ ಬಗ್ಗೆ ಜಾಗೃತಿ ಮೂಡಿಸಲು ಮಂಡ್ಯ ಕೃಷಿ ಇಲಾಖೆಯೂ ನಡೆಸಿದ ಬೆಲ್ಲದ ಪರಿಷೆ ಜನರ ಗಮನ ಸೆಳೆಯಿತು. ಮಳಿಗೆಯಲ್ಲಿ ರೋಲ್ ಬೆಲ್ಲ, ಗುಂಡು ಬೆಲ್ಲ, ಬಕೆಟ್ ಬೆಲ್ಲ, ಅಚ್ಚು ಬೆಲ್ಲ ಹೀಗೆ ತರಹೇವಾರಿ ಬೆಲ್ಲದುಂಡೆಗಳನ್ನು ಒಪ್ಪವಾಗಿ ಜೋಡಿಸಿದ್ದರು. ಜತೆಗೆ ಬೆಲ್ಲದಲ್ಲೇ ಮಾಡಿರುವ ಗೋಲಾಕಾರ, ಗೋಪುರ, ಗಾಣದ ಮನೆ, ಗಣಪತಿ ವಿಗ್ರಹ, ಗೌರಿ ವಿಗ್ರಹ, ದೀಪ ಇನ್ನಿತರ ಆಕೃತಿಗಳು ಗಮನ ಸೆಳೆದವು.

ಸೌದೆ ಒಲೆ: ಮನೆ ಮುಂದೆ ಎರಡು ತೆಂಗಿನ ಮರಗಳಿದ್ದರೆ ಸಾಕು, ಅವುಗಳಿಂದ ದೊರೆಯುವ ತೆಂಗಿನ ಕಾಯಿ ಸಿಪ್ಪೆಯಂತಹ ವಸ್ತುಗಳಿಂದಲೇ ಸುಲಭದಲ್ಲಿ ಬಿಸಿ ನೀರು ತಯಾರಿಸುವ ಬಾಯ್ಲರ್‌ಗಳು, ಕಡಿಮೆ ಸೌದೆಯಲ್ಲಿ ಒಲೆ ಉರಿಸಿ ಅಡುಗೆ ಮಾಡಬಹುದಾದ ಒಲೆಗಳ ಬಗ್ಗೆ ಜನರು ವಿವರ ಪಡೆದರು. ಫೀನಿಕ್ಸ್‌ ಪ್ರಾಡಕ್ಟ್‌ ಮಳಿಗೆಯಲ್ಲಿದ್ದ ಇಂಥ ಒಲೆಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ’ಸಾಮಾನ್ಯವಾಗಿ ಅಡುಗೆ ತಯಾರಿಗಾಗಿ ಒಲೆ ಉರಿಸಲು ಬಳಸುವ ಸೌದೆಯ ಶೇ10ರಷ್ಟರಲ್ಲಿ ಈ ಹೊಸ ತಂತ್ರಜ್ಞಾನದ ಒಲೆಯಲ್ಲಿ ಅಡುಗೆ ಮಾಡಬಹುದು’ ಎಂದು ಮಳಿಗೆಯ ಬಸವರಾಜ್‌ ಬೆಳಗಾವಿ ವಿವರಿಸಿದರು.

ವಿದೇಶಿ ಸೊಪ್ಪು ತರಕಾರಿ: ಪಾಲಿಹೌಸ್‌ನಲ್ಲಿ ಬೆಳೆಸಿದ್ದ ಕೇಲ್, ಲೀಕ್, ಸೆಲೆರಿ, ಪಾಕ್ ಚಾಯ್, ಐಸ್‍ಬರ್ಗ್ ಲೆಟ್ಯೂಸ್, ಕೆಂಪು ಲೆಟ್ಯೂಸ್, ಹಸಿರು ಲೆಟ್ಯೂಸ್, ರಾಕೆಟ್ ಲೆಟ್ಯೂಸ್, ರೊಮ್ಯಾನಿ ಲೆಟ್ಯೂಸ್, ಚೈನೀಸ್ ಎಲೆಕೋಸು, ಕೆಂಪು ಎಲೆಕೋಸು, ಬ್ರೊಕೋಲಿಯಂತಹ ತರಕಾರಿಗಳನ್ನು ಜನರು ಕುತೂಹಲದಿಂದ ವೀಕ್ಷಿಸಿ, ಮಾಹಿತಿ ಪಡೆದರು. ವಿವಿಧ ರೋಗಗಳಿಗೆ ಈ ಸೊಪ್ಪು-ತರಕಾರಿಗಳು ಉತ್ತಮ ಔಷಧವಾಗುತ್ತವೆ ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಆಕರ್ಷಣೆಯ ಕೇಂದ್ರವಾದ ‘ಕಡಿಮೆ ಕಟ್ಟಿಗೆ ಬಳಸಿ ಹೆಚ್ಚು ಜನರಿಗೆ ಅಡುಗೆ ಮಾಡಬಹುದಾದ ಒಲೆ’

ಮನೆಯಲ್ಲೇ ಎಣ್ಣೆ ತೆಗೆಯಬಹುದಾದ ಯಂತ್ರಗಳ ಬಗ್ಗೆ ಮಾಹಿತಿ ನೀಡುತ್ತಿರುವ ‘ಯಂತ್ರ’ ಮಳಿಗೆಯ ಸಿಬ್ಬಂದಿ

ಕೃಷಿ ಮೇಳದಲ್ಲಿ ಸೋಮವಾರ ವಿದ್ಯಾರ್ಥಿಗಳು ಕೃಷಿ ಪರಿಕರದ ಯಂತ್ರದಿಂದ ಬಂದ ಸ್ಪ್ರೇ ನೀರಿನಲ್ಲಿ ಸಂಭ್ರಮಿಸಿದರು

ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳು ಕೃಷಿ ಪರಿಕರಗಳನ್ನು ಕುತೂಹಲದಿಂದ ವೀಕ್ಷಿಸಿದರು

ಕೃಷಿಮೇಳದಲ್ಲಿ ಚೆಂಡು ಹೂವುಗಳ ಮಧ್ಯೆ ಕಂಡು ಬಂದ ವಿದ್ಯಾರ್ಥಿನಿಯರು

ತಾರಸಿಯಲ್ಲೇ ಬೆಳೆಸಬಹುದಾದ ‘ವಿಯೆಟ್ನಾಂ ಸೂಪರ್‌ ಅರ‍್ಲಿ’ ಹಲಸು

ಹಸುಗಳಿಗೂ ಹಾಸಿಗೆ !

ಕೊಟ್ಟಿಗೆಯಲ್ಲಿ ಸೊಪ್ಪು ಹುಲ್ಲು ಹರಡಿ ಹಸು ಎಮ್ಮೆಗಳನ್ನು ಸಾಕಲಾಗುತ್ತಿತ್ತು. ಮುಂದೆ ಕಲ್ಲು ಹಾಸಿನ ನೆಲ ಸಿಮೆಂಟ್‌ ನೆಲಗಳಲ್ಲಿ ಸಾಕುವ ಪದ್ಧತಿ ರೂಢಿಯಾಗಿತ್ತು. ಇದೀಗ ಹಸುಗಳಿಗೂ ಹಾಸಿಗೆ ಬಂದಿದೆ ! ಕೃಷಿ ಮೇಳದಲ್ಲಿದ್ದ ಶಿಡ್ಲಘಟ್ಟ ಪಬ್ಲಿಕ್ಸ್ ಆಗ್ರೊ ಮಳಿಗೆಯಲ್ಲಿ ಈ ರಬ್ಬರ್ ಹಾಸಿಗೆಗಳ ಬಗ್ಗೆಯೇ ಮಾಹಿತಿ ಪಡೆಯಲು ರೈತರು ಮುಗಿಬಿದ್ದಿದ್ದರು. ಈ ಹಾಸಿಗೆಗಳಿಗೆ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಸಬ್ಸಿಡಿಯೂ ಸಿಗುತ್ತದೆ. ಜಾನುವಾರುಗಳ ಗೊರಸಿಗೆ ಗಾಯವಾಗದ ಜಾರಿ ಬೀಳದ ಈ ಹಾಸಿಗೆಯಲ್ಲಿ ಸಗಣಿ ಗಂಜಲವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಎಂದು ಮಳಿಗೆಯ ಎಂ.ಎಸ್. ಮನು ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ

ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಮಟ್ಟದ ‘ಪ್ರಗತಿಪರ ರೈತ’ ‘ರೈತ ಮಹಿಳೆ’ ಈ ಜಿಲ್ಲೆಗಳ ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ‘ಯುವರೈತ’ ಹಾಗೂ ‘ರೈತ ಮಹಿಳೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಸ್ತು ಪ್ರದರ್ಶನದ ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಯಿತು. ಮಹರ್ಷಿ ಆನಂದ್ ಗುರೂಜಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್‌.ವಿ. ಸುರೇಶ್‌ ಇದ್ದರು. ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಿಂದ 15 ತಂಡಗಳಲ್ಲಿ 900 ’ದೇಸಿ’ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿ ಸಮಾರೋಪಕ್ಕೆ ಮೆರಗು ನೀಡಿದರು.

ಸರ್ವ ಋತು ಗಿಡಗಳು

ಮನೆ ತಾರಸಿಯಲ್ಲೇ ಬೆಳೆಯಬಲ್ಲ ವಿಯೆಟ್ನಾಂ ಸೂಪರ್‌ ಅರ‍್ಲಿ ಹಲಸಿನ ಗಿಡಗಳನ್ನು ಜನರು ಭಾರಿ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿರುವುದು ಕಂಡು ಬಂತು. ಹಿತಕಾರಿ ನರ್ಸರಿಯಲ್ಲಿದ್ದ ಈ ಗಿಡಗಳು ಒಂದೇ ವರ್ಷಕ್ಕೆ ಹಣ್ಣು ನೀಡುತ್ತವೆ. 40–50 ವರ್ಷ  ಫಲ ನೀಡುವ ಈ ಗಿಡಗಳು ಹೆಚ್ಚು ಎತ್ತರ ಬೆಳೆಯುವುದಿಲ್ಲ ಎಂದು ನರ್ಸರಿಯ ಆಡಳಿತ ನಿರ್ದೇಶಕ ಬೈರರೆಡ್ಡಿ ಎಂ.ಎಸ್‌. ಮಾಹಿತಿ ನೀಡಿದರು. ಇದೇ ರೀತಿ ವರ್ಷ ಪೂರ್ತಿ ಕಾಯಿ ಬಿಡುವ ನಿಂಬೆ ಮಾವು ಸಹಿತ ವಿವಿಧ ನರ್ಸರಿಗಳಲ್ಲಿ ಇದ್ದ ತರಹೇವರಿ ಗಿಡಗಳು ಗಮನ ಸೆಳೆದವು. ₹ 50 ಸಾವಿರ ಮೌಲ್ಯದ ‘ಬ್ರೆಜಿಲಿಯನ್‌ ಟ್ರೀ ಗ್ರೇಪ್‌’ ಗಿಡವನ್ನು ಜನರು ವೀಕ್ಷಿಸಿ ಅದರ ದರ ಕಂಡು ಹೌಹಾರಿ ಮುಂದಕ್ಕೆ ಸಾಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.