ಬೆಂಗಳೂರು: ಕೃಷಿ ವಿಶ್ವವಿದ್ಯಾಲಯವು ನ.11ರಿಂದ 14ರವರೆಗೆ ಆಯೋಜಿಸಿರುವ ‘ಕೃಷಿ ಮೇಳ’ಕ್ಕಾಗಿಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ)ಆವರಣ ಸಜ್ಜಾಗಿದೆ.
ಬುಧವಾರವೇ ಮೇಳಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ವೇದಿಕೆ ಕಾರ್ಯಕ್ರಮ ನಡೆಯುವ ಬೃಹತ್ ಸಭಾಂಗಣ ಹಾಗೂ 500ಕ್ಕೂ ಹೆಚ್ಚು ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.
ಮೇಳಕ್ಕೆ ಬರುವವರ ವಾಹನಗಳ ನಿಲುಗಡೆಗಾಗಿ ಅಲ್ಲಲ್ಲಿ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಒಂದೇ ಕಡೆ ಹೆಚ್ಚು ಜನ ಸೇರುವುದನ್ನು ತಡೆಯಲು ಸಭಾಂಗಣ ಹಾಗೂ ಮಳಿಗೆಗಳನ್ನುವಿಶಾಲವಾದ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಮೇಳಕ್ಕೆ ಬರುವ ರೈತರಿಗೆ ತೋಟದಲ್ಲೇ ಮಾಹಿತಿ ನೀಡುವ ಉದ್ದೇಶದಿಂದ ಆವರಣದಲ್ಲಿ ಬೆಳೆಗಳ ಪ್ರದರ್ಶನ ತಾಕುಗಳನ್ನು ಹಲವು ತಿಂಗಳ ಹಿಂದಿನಿಂದಲೇ ಸಿದ್ಧಪಡಿಸಲಾಗಿದೆ. ತೋಟದಲ್ಲಿ ರೈತರು ಸಂಚರಿಸಲು ಅನುಕೂಲವಾಗುವಂತೆ ಮಾರ್ಗಗಳನ್ನು ಸಜ್ಜುಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಕೆಲಸಗಾರರು ಬುಧವಾರವೇ ಎಲ್ಲ ಪ್ರದರ್ಶನ ತಾಕುಗಳನ್ನು ಸ್ವಚ್ಛಗೊಳಿಸಿದರು. ಪ್ರತಿ ತೋಟದಲ್ಲಿ ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರೈತರಿಗೆ ಮಾಹಿತಿ ನೀಡಲಿದ್ದಾರೆ. ದೂರದ ಊರಿನ ರೈತರಿಗಾಗಿ ಈ ಬಾರಿಯೂ ಆನ್‌ಲೈನ್ ಮೂಲಕ ಕೃಷಿ ಮೇಳ ವೀಕ್ಷಣೆಗೆ ತಾಂತ್ರಿಕ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ.
ಮೇಳಕ್ಕೆ ಮಳೆ ಅಡ್ಡಿಯಾಗದು: ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಗುರುವಾರ (ನ.11) ಮಳೆಯಾಗುವ ಮುನ್ಸೂಚನೆ ಇದೆ. ಆದರೆ. ಮಳೆಯಿಂದ ಕೃಷಿ ಮೇಳಕ್ಕೆ ಯಾವುದೇ ರೀತಿ ಅಡ್ಡಿಯಾಗುವುದಿಲ್ಲ. ಅದಕ್ಕೆ ಬೇಕಾದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಮೇಳಕ್ಕೆ ಬರುವ ಜನರಿಗೆ ಮಳೆಯಿಂದ ಸಮಸ್ಯೆಯಾಗದಂತೆ ಈ ಬಾರಿ ವೇದಿಕೆ ಕಾರ್ಯಕ್ರಮ ನಡೆಯುವ ಸಭಾಂಗಣ ಹಾಗೂ ಮಳಿಗೆಗಳನ್ನು ಜಲನಿರೋಧಕ (ವಾಟರ್‌ಪ್ರೂಫ್) ಹೊದಿಕೆಗಳಿಂದ ಸಿದ್ಧಪಡಿಸಲಾಗಿದೆ. ಜಿಕೆವಿಕೆ ಆವರಣದಲ್ಲಿ ಸಂಚಾರಕ್ಕೆ ಯೋಗ್ಯವಾದ ಡಾಂಬರು ರಸ್ತೆಗಳೇ ಇವೆ.ಒಂದು ವೇಳೆ ಮಳೆ ಬಂದರೂ ಜನ ಆತಂಕ ಪಡುವ ಅಗತ್ಯವಿಲ್ಲ’ ಎಂದು ವಿಶ್ವವಿದ್ಯಾಲಯದ ಕೃಷಿ ಮಾಹಿತಿ ಘಟಕದ ಮುಖ್ಯಸ್ಥ ಕೆ.ಶಿವರಾಮು ತಿಳಿಸಿದರು.
ಪ್ರದರ್ಶನ ಮಳಿಗೆಗಳಲ್ಲಿ ಏನೇನು?
ರೈತರಿಗಾಗಿ ಮೇಳದಲ್ಲಿ 500ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಪರಿಕರ ಸಂಸ್ಥೆಗಳ ನವೋದ್ಯಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆ ಮತ್ತು ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳ ಮಳಿಗೆಗಳು, ಕೃಷಿ ಮತ್ತು ನೀರಾವರಿ ಉಪಕರಣಗಳು, ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳು, ಸಾವಯವ ವಸ್ತುಗಳು, ಅಲಂಕಾರಿಕ, ಔಷಧೀಯ ಹಾಗೂ ಹಣ್ಣಿನ ಸಸಿಗಳು, ಬೇಕರಿ ಮತ್ತು ತಿನಿಸುಗಳು, ವಿಚಾರಣೆ, ವೈದ್ಯಕೀಯ, ಸಮಾಲೋಚನೆಯ ಮಳಿಗೆಗಳು ಈ ಬಾರಿ ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.