ಬೆಂಗಳೂರು: ಆಲಂಕಾರಿಕ ಗಿಡಗಳು, ತಾರಸಿ ತೋಟದಲ್ಲಿ ಬೆಳೆಸುವ ಸಸಿಗಳು, ನಗರದ ಮನೆಗಳ ಅಲ್ಪ ಸ್ಥಳದಲ್ಲೇ ಹಸಿರು ಕಾಣಿಸುವ ಉತ್ಸಾಹಕ್ಕೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕೃಷಿ ಮೇಳ ನೀರೆರೆಯಿತು.
ಮೇಳದ ಮೂರನೇ ದಿನ ‘ಊರು–ಕೇರಿ’ ಪ್ರದರ್ಶನ ಮಳಿಗೆಪ್ರದೇಶದಲ್ಲಿ ಪುಟ್ಟ ಸಸಿಗಳ ಲೋಕವೇ ಅನಾವರಣಗೊಂಡಿತ್ತು. ಪಾಮ್, ಡೆಕ್ಕನ್ ಫ್ಲೆಕ್ಕಿ, ಕ್ರೋಟನ್ ಗಿಡಗಳು, ದೇಸಿನಾ, ಅರೇಬಿಯಾ, ಅಗ್ರೋನಿಮಾ, ಪರ್ಲ್ಸ್, ಪೈಕಸ್, ಕತ್ತಾಳೆ, ಕೇದಗೆ, ದೇವಕಣಗಿಲೆ, ಬ್ರಹ್ಮಕಮಲ, ಬಳ್ಳಿಗಳು ಜನರನ್ನು ಸೆಳೆದವು.
ರಿಬ್ಬನ್ ಕ್ರಾಸ್, ರಾಯಲ್ ಪಾಮ್, ಕಳ್ಳಿಗಿಡಗಳು ಆಯುರ್ವೇದಕ್ಕೆ ಸಂಬಂಧಿಸಿದ ಗುಲಗಂಜಿ, ನಸುಗುನ್ನಿ, ಅಶ್ವಗಂಧ, ಬೇವು, ಹುಣಸೆ ಹೀಗೆ ವಿವಿಧ ಜಾತಿಯ ಸಾಲು ಸಸಿಗಳು ಪುಟ್ಟ ಕುಂಡ, ಪ್ಲಾಸ್ಟಿಕ್ ಚೀಲಗಳಲ್ಲಿ ನೆಲೆಸಿ ಗ್ರಾಹಕರಿಗಾಗಿ ಕಾಯುತ್ತಿದ್ದವು. ₹ 60ರಿಂದ ಹಿಡಿದು ₹ 500ರವರೆಗೆ ದರ ಇತ್ತು. ತಾರಸಿ, ಮನೆಯ ಗೋಡೆಗಳಿಗೆ ಹಬ್ಬಿಸುವ ಮಲ್ಲಿಗೆ ಬಳ್ಳಿ, ಕೆಂಪು ಹೂವು, ಆಲಂಕಾರಿಕ ಎಲೆಗಳ ಬಳ್ಳಿಗಳಿಗೂ ಬೇಡಿಕೆ ಇತ್ತು.
ತೋಟಗಾರಿಕೆ ಇಲಾಖೆಯೇ ಅಭಿವೃದ್ಧಿಪಡಿಸಿದ ರಸಬಾಳೆ, ನೇಂದ್ರಬಾಳೆ, ಕ್ಯಾವಂಡೀಸ್ ಸಸಿಗಳು ಇದ್ದವು. ಇದೇ ಹಾದಿಯಲ್ಲಿ ಪುಟ್ಟ ಟ್ರೇಗಳಲ್ಲಿ ಬೆಳೆಸಿದ ಸಬ್ಬಸಿಗೆ, ಪಾಲಕ್, ಪುದೀನಾ, ಕೊತ್ತಂಬರಿ ಸೊಪ್ಪು ಗೃಹಿಣಿಯರನ್ನು ಆಕರ್ಷಿಸಿದವು. ಮನೆಯಲ್ಲೇ ಬೆಳೆಸಿದರೆ ತಾಜಾ ಸೊಪ್ಪುಗಳನ್ನು ಕಾಸು ಖರ್ಚಿಲ್ಲದೇ ಪಡೆಯಬಹುದಲ್ಲವೇ ಎಂಬ ಮಾತುಕತೆ ಅವರೊಳಗೆ ನಡೆಯಿತು.
ಈ ಪ್ರದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದದ್ದು ಆಯುರ್ವೇದ ಉತ್ಪನ್ನಗಳಿಗೆ. ವಿವಿಧ ನೋವುಗಳಿಗೆ ಒಂದೇ ತೈಲ. ಹಲ್ಲುಜ್ಜುವ ಪುಡಿ, ಅಜೀರ್ಣಕ್ಕೆ ಬಳಸುವ, ಮೂಲವ್ಯಾಧಿ ನಿವಾರಿಸುವ ಔಷಧಿಗಳು ಮಾರಾಟಕ್ಕಿದ್ದವು.
ಮಡಿಕೇರಿ ಹಣ್ಣಿನ ವೈನ್: ಕೊಡಗಿನ ಗೃಹ ತಯಾರಿಕೆಯ ವೈನ್‌ಗಳು ಆಕರ್ಷಕ ಬಾಟಲಿಗಳಲ್ಲಿ ಗ್ರಾಹಕರನ್ನು ಸೆಳೆದವು. ದ್ರಾಕ್ಷಿ, ದಾಳಿಂಬೆ, ಚಿಕ್ಕು, ಹಾಗೂ ಮಿಶ್ರ ಹಣ್ಣುಗಳ ವೈನ್‌ನ್ನು ಮಾರಾಟಕ್ಕಿಡಲಾಗಿತ್ತು. ‘ಕೊಡಗಿನ ಸಂತ್ರಸ್ತರಿಗೆ ನೆರವು ನೀಡಲು ಈ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ’ ಎಂಬ ಬರಹವು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಜನರ ಗಮನ ಸೆಳೆದ ಇಲಿ ಟ್ರ್ಯಾಪ್
ತೆಂಗಿನ ಮರದಲ್ಲಿ ಕಾಯಿ ತಿನ್ನುವ ಇಲಿ ಹಿಡಿಯಲು ಬಳಸುವ ಟ್ರ್ಯಾಪ್ ರೈತರನ್ನು ಸೆಳೆಯಿತು. ಟ್ರ್ಯಾಪ್‌ನ್ನು ಬಿದಿರಿನ ಬುಟ್ಟಿ ಅಥವಾ ಹಲಗೆಯಲ್ಲಿ ಜೋಡಿಸಬೇಕು. ಟ್ರ್ಯಾಪ್‌ಗೆ ಇಲಿ ಆಕರ್ಷಕ ತಿನಿಸನ್ನಿಟ್ಟು ಮರದಷ್ಟೇ ಉದ್ದವಿರುವ ಹಗ್ಗಕ್ಕೆ ಈ ಟ್ರ್ಯಾಪನ್ನು ಜೋಡಿಸಿ ತೆಂಗಿನ ಮರದ ಮೇಲೆ ಅಳವಡಿಸಬೇಕು. ತಿನಿಸಿನಾಸೆಗೆ ಬಂದ ಇಲಿ ಟ್ರ್ಯಾಪ್‌ನಲ್ಲಿ ಸಿಲುಕುತ್ತದೆ. ಅಂದಹಾಗೆ ಇಲಿ ಹೊಡೆಯುವವರಿಗೂ ಭಾರೀ ಬೇಡಿಕೆ ಇದೆಯಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.