ADVERTISEMENT

ಕೃಷಿ ಮೇಳ: ಕತ್ತೆ ಹಾಲಿನ ಸೋಪು, ಕ್ರೀಂಗಳ ಆಕರ್ಷಣೆ

ಗಮನ ಸೆಳೆದ ಅಳಿವಿನಂಚಿನ ಪುಂಗನೂರು ಗಿಡ್ಡ ಹಸು, ವರ್ಣರಂಜಿತ ಬ್ರಾಯ್ಲರ್‌ ಕೋಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 22:45 IST
Last Updated 14 ನವೆಂಬರ್ 2024, 22:45 IST
ಕೃಷಿ ಮೇಳದಲ್ಲಿ ಪ್ರದರ್ಶಿಸಲಾದ ಕತ್ತೆ ಹಾಲಿನ ಉತ್ಪ‍ನ್ನಗಳು 
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಕೃಷಿ ಮೇಳದಲ್ಲಿ ಪ್ರದರ್ಶಿಸಲಾದ ಕತ್ತೆ ಹಾಲಿನ ಉತ್ಪ‍ನ್ನಗಳು  ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ಕತ್ತೆ ಹಾಲಿನ ಉತ್ಪ‍ನ್ನಗಳು ಕೃಷಿ ಮೇಳದಲ್ಲಿ ಹೆಚ್ಚು ಆಕರ್ಷಿತವಾಗುತ್ತಿವೆ. ಹಾಲಿನ ಸೋಪು, ಮುಖಕ್ಕೆ ಹಚ್ಚುವ ಕ್ರೀಂಗಳನ್ನು ಕಂಡು ಜನರು ಪುಳಕಿತರಾದರು.

‘ಕತ್ತೆ ಹಾಲು ಆರೋಗ್ಯದಾಯಕವಾಗಿದ್ದು, ಮಕ್ಕಳಿಗೆ, ಅನಾರೋಗ್ಯದಿಂದ ಇರುವವರಿಗೆ ಕತ್ತೆ ಹಾಲು ಕುಡಿಸುತ್ತಾರೆ. ಅದೇ ಹಾಲಿನಿಂದ ಸೋಪು ಮಾಡಲಾಗಿದೆ. ಇದರಿಂದ ನೈಸರ್ಗಿಕ ಶುಚಿತ್ವದ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಚರ್ಮ ಸುಕ್ಕುಗಟ್ಟುವುದು, ತಲೆಯಲ್ಲಿ ಹೊಟ್ಟು ಬಾರದಂತೆ ತಡೆಯುವುದು ಸಹಿತ ಅನೇಕ ಪ್ರಯೋಜನಗಳಿವೆ’ ಎಂದು ಕ್ಷೀರಸಾಗರ ಕತ್ತೆ ಫಾರ್ಮ್‌ನ ರಂಗೇಗೌಡರು ರೈತರಿಗೆ ವಿವರ ನೀಡಿದರು.

‘ಡಾಂಕಿ ಮಿಲ್ಕ್‌ ನೈಟ್ ಕ್ರೀಂ’ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ ಎಂದು ರಂಗೇಗೌಡರು ಮಾಹಿತಿ ನೀಡುವಾಗ ಹೆಣ್ಣುಮಕ್ಕಳ ಮುಖ ಅರಳಿತು. ಕೃಷಿಗೆ ಉಪಯೋಗವಾಗುವ ಕತ್ತೆಯ ಸೆಗಣಿಯಿಂದ ತಯಾರಿಸಿದ ಗೊಬ್ಬರ, ಕತ್ತೆಮೂತ್ರ ಕೂಡ ಪ್ರದರ್ಶನಕ್ಕಿಡಲಾಗಿತ್ತು.

ADVERTISEMENT

ಪಂಜಾಬ್‌ ಕೋಳಿ: ನಾಟಿಕೋಳಿ, ಗಿರಿರಾಜ ಕೋಳಿಗಳನ್ನು ಹೋಲುವ ವರ್ಣರಂಜಿತ ಮತ್ತು  ದೊಡ್ಡ ಕೋಳಿಗಳು ಆಕರ್ಷಕವಾಗಿದ್ದವು. ಅವುಗಳು ಬ್ರಾಯ್ಲರ್‌ ಕ್ರಾಸ್‌ ಕೋಳಿಗಳು ಎಂದು ಗಣೇಶ್ ಮತ್ತು ಸಚಿನ್‌ ವಿವರ ನೀಡುವವರೆಗೆ ಊರ ಕೋಳಿಯ ತಳಿಗಳೇ ಇರಬೇಕು ಎಂದು ಭಾವಿಸುವಂತಿದ್ದವು.

‘ಪಂಜಾಬ್‌ನಿಂದ ತಂದು ನಾವು ಪ್ರಯೋಗ ಮಾಡಿದ್ದೇವೆ. ಬಣ್ಣದ ಬ್ರಾಯ್ಲರ್‌ ಕೋಳಿಗಳು ಕಡಿಮೆ ಮೊಟ್ಟೆ ಇಡುತ್ತವೆ. ವರ್ಷಕ್ಕೆ 100ರಿಂದ 120 ಮೊಟ್ಟೆ ಇಟ್ಟರೆ ಹೆಚ್ಚು. ಆದರೆ, ಎಂಟೇ ತಿಂಗಳಲ್ಲಿ ಮೂರೂವರೆ ಕೆ.ಜಿ. ತೂಗುತ್ತವೆ. ಹಾಗಾಗಿ ಇದನ್ನು ಮಾಂಸಕ್ಕೆ ಬಳಸಲಾಗುತ್ತದೆ. ಸಾಕುವವರಿಗೆ ₹ 25ಕ್ಕೆ ಒಂದರಂತೆ ಕೋಳಿಮರಿಗಳನ್ನು ಒದಗಿಸಲಾಗುವುದು’ ಮಾಹಿತಿ ನೀಡಿದರು.

ವರ್ಷಕ್ಕೆ 160ರಿಂದ 180 ಮೊಟ್ಟೆ ಇಡುವ ಜೊತೆಗೆ ಮಾಂಸಕ್ಕೂ ಉಪಯೋಗವಾಗುವ ಸ್ವರ್ಣಧಾರಾ ಕೋಳಿಗಳ ಸಹಿತ ವಿವಿಧ ತಳಿಗಳ ಕೋಳಿಗಳು ಮನಸೆಳೆದವು.

ನಾಟಿಕೋಳಿಯಂತೆ ಕಾಣುವ ವರ್ಣರಂಜಿತ ಬ್ರಾಯ್ಲರ್‌ ಕೋಳಿ ‘ರಾಜ–2’ವನ್ನು ಕೋಳಿಪ್ರಿಯರು ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.

ಪುಂಗನೂರು ಹಸು: ಭಾರತದ ಹಸುಗಳ ಮೂಲ ತಳಿಗಳಲ್ಲಿ ಅತಿ ವೇಗದಲ್ಲಿ ಅಳಿವಿನಂಚಿಗೆ ಸಾಗುತ್ತಿರುವ ಪುಂಗನೂರು ಗಿಡ್ಡಹಸುಗಳೆರಡು ತನ್ನ ಆಕಾರ ಮತ್ತು ಸೌಂದರ್ಯದಿಂದ ಸೆಳೆದವು. ದೇಶದಲ್ಲಿ ಈ ತಳಿಯ ಹಸುಗಳು ಒಂದು ಸಾವಿರ ಮಾತ್ರ ಇವೆ. ಅದರಲ್ಲಿ ‘ಸ್ವರ್ಣ ಕಪಿಲ’ ಹಸು ಕೇವಲ ಐದು ಇವೆ. ಗೊರಸು, ಕಣ್ಣಿನ ರೆಪ್ಪೆಯಿಂದ ಹಿಡಿದು ಎಲ್ಲವೂ ಚಿನ್ನದ ಬಣ್ಣವನ್ನೇ ಹೊಂದಿರುವ ಈ ಹಸು ವಿಶಿಷ್ಠವಾಗಿತ್ತು. 

2ರಿಂದ 3 ಅಡಿಯಷ್ಟೇ ಬೆಳೆಯುವ ಈ ಹಸುಗಳ ಬೆಲೆ ಮಾತ್ರ ₹ 1.5 ಲಕ್ಷದಿಂದ ₹ 2 ಲಕ್ಷದವರೆಗೆ ಇದೆ. ಒಂದು ಲೀಟರ್‌ವರೆಗೆ ಹಾಲು ನೀಡುತ್ತಿದೆ. ಇದರ ಹಾಲಿಗೂ ಆಡು, ಮೇಕೆಗಳ ಹಾಲಿನಂತೆ ಭಾರಿ ಬೆಲೆ ಎಂದು ಶ್ರೀ ಕೃಷ್ಣ ಗೋಶಾಲೆಯ ಕೃಷ್ಣಮೂರ್ತಿ ತಿಳಿಸಿದರು.

ಗಾಣದ ಎತ್ತುಗಳು, ಹಳ್ಳಿಕಾರ್‌ ಎತ್ತುಗಳು, ಉದ್ದಕಿವಿಯ ಆಡು ಸೇರಿದಂತೆ ವಿವಿಧ ತಳಿಯ ಆಡುಗಳನ್ನು ರೈತರು ಕುತೂಹಲದಿಂದ ವೀಕ್ಷಿಸಿದರು.

₹ 5 ಲಕ್ಷ ಮೌಲ್ಯದ ಜಾಫರಾಬಾದಿ ಎಮ್ಮೆ
ಎಮ್ಮೆ ಬೆಲೆ ₹5 ಲಕ್ಷ
ಜಾಫರಾಬಾದಿ ಎಮ್ಮೆ ತನ್ನ ವಿಶಿಷ್ಟ ಶೈಲಿ ಮತ್ತು ಬೆಲೆಯ ಕಾರಣಕ್ಕೆ ಅಚ್ಚರಿ ಮೂಡಿಸಿತು. ಒಂದು ಹೊತ್ತಿಗೆ 15ರಿಂದ 25 ಲೀಟರ್‌ ಹಾಲು ಕೊಡುವ ಈ ಎಮ್ಮೆಯ ಬೆಲೆ ₹ 5 ಲಕ್ಷದಿಂದ ₹ 5.5 ಲಕ್ಷ.  ಭಾರತ (ಈಗಿನ ಪಾಕಿಸ್ತಾನ) ಮೂಲದ ಈ ಎಮ್ಮೆ ವರ್ಷಪೂರ್ತಿ ಹಾಲು ಕೊಡುತ್ತದೆ. 
ರೈತರ ಅಭಿಪ್ರಾಯಗಳು

‘ಸಂಶೋಧನೆಗಳು ಉಪಯುಕ್ತ

ಕೃಷಿಗೆ ಅನುಕೂಲವಾಗುವ ಹೊಸ ಸಂಶೋಧನೆಗಳು, ನಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಈ ಮೇಳ ಉಪಯುಕ್ತವಾಗಿದೆ. ಹೊಸ ತಳಿಗಳ ಬೆಳೆ, ಹಣ್ಣು–ಹೂವು ಮತ್ತು ಕೋಳಿ, ಪ್ರಾಣಿಗಳ ತಳಿಗಳು ಬಹಳ ಚೆನ್ನಾಗಿವೆ.

– ಶಿವರಾಜು ಎನ್‌., ರಾಮನಗರ ಜಿಲ್ಲೆ

‘ಕೃಷಿ ಪದ್ಧತಿ ಸುಧಾರಣೆ’

ನಮ್ಮ ಕೃಷಿ ಪದ್ಧತಿಯನ್ನು ಸುಧಾರಿಸಿಕೊಳ್ಳಬೇಕು. ಇಲ್ಲಿ ಹೊಸ ವಿಷಯಗಳನ್ನು ಕಂಡಿದ್ದೇವೆ. ಕೃಷಿ ಇಲಾಖೆ ನೆರವಿನಿಂದ ನಮ್ಮ ಬೇಸಾಯ ಪದ್ಧತಿಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳ ಪ್ರಯತ್ನಿಸುತ್ತೇವೆ. ಕೃಷಿ ಮೇಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು ಖುಷಿ ನೀಡಿದೆ.

– ಕೆ. ಪದ್ಮಾ, ಚಿಕ್ಕಬಳ್ಳಾಪುರ ಜಿಲ್ಲೆ

‘ಬಿತ್ತನೆ ಬೀಜಗಳ ಮಾಹಿತಿ’

ಮೇಳದಲ್ಲಿ ಕಂಡ ಹೊಸ ಮಾಹಿತಿಯನ್ನು ನಮ್ಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಹಲವು ಹೊಸ ವಿಷಯಗಳನ್ನು ಇಲ್ಲಿ ಕಂಡಿದ್ದೇವೆ. ಬಿತ್ತನೆ ಬೀಜಗಳ ಕುರಿತು ಹೆಚ್ಚು ಮಾಹಿತಿ ಪಡೆದುಕೊಂಡಿದ್ದೇವೆ.

– ಎ. ಮರಿಯಪ್ಪ, ರಾಮನಗರ ಜಿಲ್ಲೆ

‘ತಾಂತ್ರಿಕ ಉಪಕರಣಗಳ ಅನುಕೂಲ’

ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ ಹೊಸ ತಳಿಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡಿದ್ದೇವೆ. ಈ ತಳಿಗಳ ಬೀಜ ಖರೀದಿಸಿ ನಮ್ಮ ಜಮೀನಿನಲ್ಲಿ ಬೆಳೆದು ಹೆಚ್ಚು ಆದಾಯ ಮಾಡಿಕೊಳ್ಳುತ್ತೇನೆ. ಇಲ್ಲಿನ ತಾಂತ್ರಿಕ ಉಪಕರಣಗಳು ರೈತರಿಗೆ ಅನುಕೂಲವಾಗಲಿವೆ. 

– ಸುನಂದಾ, ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.