ಬೆಂಗಳೂರು: ನೆಲೆಗಡಲೆ ಬಿತ್ತನೆ ಮಾಡುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ‘ಟೆರ್‍ರಾಕ್ರಾಫ್ಟ್’ ಎಂಬ ಸಂಸ್ಥೆಯು ವಿದ್ಯುತ್ ಚಾಲಿತ ‘ಕೃಷಿಬಾಟ್’ ಎಂಬ ರಿಮೋಟ್ ನಿಯಂತ್ರಿತ ಯಂತ್ರವನ್ನು ಅಭಿವೃದ್ಧಿಪಡಿಸಿದೆ.
ಇಲ್ಲಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಪ್ರದರ್ಶನದಲ್ಲಿ ಈ ಯಂತ್ರದ ಗಮನ ಸೆಳೆಯಿತು.
ನೆಲಗಡಲೆಯನ್ನು ಸುಲಭವಾಗಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ‘ಕೃಷಿಬಾಟ್’ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕೂಲಿಕಾರರ ಅಗತ್ಯ ಮತ್ತು ಶ್ರಮವಿಲ್ಲದೆ ಬೀಜ ಬಿತ್ತನೆ ಮಾಡುವುದರ ಜೊತೆಗೆ ರಸಗೊಬ್ಬರವನ್ನು ಕೂಡ ಸಮನಾಗಿ ಹರಡುತ್ತದೆ.
‘ಕೃಷಿಬಾಟ್ ಸುಧಾರಿತ ಬಿತ್ತನೆ ತಂತ್ರಜ್ಞಾನ ಹೊಂದಿದ್ದು, ಪ್ರತಿ ಬೀಜವನ್ನು ಗರಿಷ್ಠ ಆಳ ಮತ್ತು ಗರಿಷ್ಠ ಇಳುವರಿಗಾಗಿ ಸಮಾನಾಂತರದಲ್ಲಿ ಬಿತ್ತನೆ ಮಾಡುತ್ತದೆ. ಇದರಿಂದ ಸಮಯವೂ ಉಳಿಯುತ್ತದೆ. ಕಾರ್ಮಿಕರು ಬೀಜಗಳನ್ನು ಒಂದು ಅಂದಾಜಿನ ಮೇಲೆ ಕೈನಲ್ಲೇ ಹಾಕುತ್ತಿದ್ದರು. ಆಗ ಕೆಲವು ಮಣ್ಣಿನ ಮೇಲೆಯೇ ಇದ್ದರೆ, ಇನ್ನೂ ಕೆಲವು ಹೆಚ್ಚು ಆಳಕ್ಕೆ ಹೋಗುತ್ತಿದ್ದವು. ಕೃಷಿಬಾಟ್ ಬಳಕೆಯಿಂದ ಬೀಜಗಳು ವ್ಯರ್ಥವಾಗುವುದನ್ನು ತಡೆಯುವುದರ ಜತೆಗೆ ಇಡೀ ಜಮೀನಿನಲ್ಲಿ ಏಕರೀತಿಯಲ್ಲಿ ಬಿತ್ತನೆ ಮಾಡಲು ಸಹಕಾರಿ ಆಗಿದೆ. ಈ ಯಂತ್ರವನ್ನು ಬೀಜ ಬಿತ್ತುವುದಕ್ಕಷ್ಟೇ ಅಲ್ಲದೆ, ಗೊಬ್ಬರ ಹಾಕಲೂ ಬಳಸಬಹುದು. ಬಿತ್ತನೆ ಪ್ರಕ್ರಿಯೆಯನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು’ ಎಂದು ಸಂಸ್ಥೆಯ ವೈಭವ್ ಮಾಹಿತಿ ನೀಡಿದರು.
‘ಈ ಯಂತ್ರವನ್ನು ಒಮ್ಮೆ ಚಾರ್ಜ್ ಮಾಡಿದರೆ ಆರು ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸಾಧನದಲ್ಲಿ ಬ್ಯಾಟರಿಗಳನ್ನು ಬದಲಿಸುವ ವ್ಯವಸ್ಥೆಯೂ ಇದೆ. ಸದ್ಯ ‘ಕೃಷಿಬಾಟ್’ ಯಂತ್ರ ಬಾಡಿಗೆಗೆ ನೀಡಲಾಗುತ್ತದೆ. ಒಂದು ಗಂಟೆಗೆ ₹1,200 ದರ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.
ನೂತನ ತಳಿಗಳ ಬಗ್ಗೆ ಮಾಹಿತಿ ಪಡೆದ ರೈತರು
ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ನಾಲ್ಕು ಹೊಸ ತಳಿಗಳಾದ ಮುಸುಕಿನಜೋಳ ಸಂಕರಣ (ಎಂಎಎಚ್ 15–85) ಅಲಸಂದೆ (ಕೆಬಿಸಿ–12) ಸೂರ್ಯಕಾಂತಿ ಸಂಕರಣ (ಕೆಬಿಎಸ್‌ಎಚ್–90) ಎಂಬ ತಳಿಗಳು ಬಿಡುಗಡೆಯಾಗಿದ್ದು ಇದರ ತಾಕುಗಳಿಗೆ ಭೇಟಿ ನೀಡಿದ್ದು ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.
ಅಲಸಂದೆ (ಕೆಬಿಸಿ12) ತಳಿಯು ಒಂದು ಎಕರೆ ಜಮೀನಿನಲ್ಲಿ 5 ರಿಂದ 6 ಕ್ವಿಂಟಲ್ ಇಳುವರಿ ಬರುತ್ತದೆ. ಇದು ದೇಶದ ಎಲ್ಲ ಪ್ರದೇಶಗಳಲ್ಲಿ ಬೆಳೆಯಬಹುದು. ಇದು 80–85 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಯು ಅಂಗಮಾರಿ ರೋಗ ಹಾಗೂ ನಂಜಾಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೆಳೆಕಾಳು ವಿಭಾಗದ ಮುಖ್ಯಸ್ಥರು ಹಾಗೂ ಪ್ರಧಾನ ವಿಜ್ಞಾನಿ ಲೋಹಿತಾಶ್ವ ಎಚ್.ಸಿ. ಮಾಹಿತಿ ನೀಡಿದರು.
ಮೆಕ್ಕೆಜೋಳ (ಎಂಎಎಚ್ 15–84) ಸಂಕರಣ ತಳಿಯು ದೇಶ ಯಾವುದೇ ಪ್ರದೇಶದಲ್ಲಿ ಬೆಳೆಯಬಹುದು. ಇದು 120 ರಿಂದ125 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಒಂದು ಎಕರೆಗೆ 38 ಕ್ವಿಂಟಲ್‌ನಿಂದ 40 ಕ್ವಿಂಟಲ್‌ವರೆಗೆ ಇಳುವರಿ ಬರಲಿದೆ ಎಂದು ಅವರು ತಿಳಿಸಿದರು.
ಸೂರ್ಯಕಾಂತಿ ಸಂಕರಣ (ಕೆಬಿಎಸ್‌ಎಚ್–90) ತಳಿಯು 80 ರಿಂದ 82 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಹೆಚ್ಚು ಎಣ್ಣೆ ಅಂಶದಿಂದ ಕೂಡಿರುತ್ತದೆ. ಒಂದು ಎಕರೆ ಖುಷ್ಕಿ ಜಮೀನಿನಲ್ಲಿ 7–8 ಕ್ವಿಂಟಲ್ ಇಳುವರಿ ಬಂದರೆ ನೀರಾವರಿಯಲ್ಲಿ 10–12 ಕ್ವಿಂಟಲ್‌ವರೆಗೂ ಇಳುವರಿ ಬರುತ್ತದೆ ಎಂದು ವಿಜ್ಞಾನಿ ಎಸ್.ಡಿ. ನೆಹರೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.