ADVERTISEMENT

ಕೇಂದ್ರ ಬಜೆಟ್‌: ಪೂರ್ವಭಾವಿ ಚರ್ಚೆಗೆ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:14 IST
Last Updated 19 ಜೂನ್ 2024, 15:14 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ದೆಹಲಿಯಲ್ಲಿ ಶನಿವಾರ ನಡೆಯಲಿರುವ ಕೇಂದ್ರ ಬಜೆಟ್‌ನ ಪೂರ್ವಭಾವಿ ಚರ್ಚೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

ಹೊಸ ಸರ್ಕಾರ ರಚನೆಯಾಗಿರುವುದರಿಂದ ಪ್ರಸಕ್ತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಹೊಸ ಬಜೆಟ್‌ ಮಂಡಿಸಲಿದೆ. ಈ ಕುರಿತ ಪೂರ್ವಭಾವಿ ಚರ್ಚೆ ಜೂನ್‌ 22ರಂದು ನಿಗದಿಯಾಗಿದ್ದು, ಅದರಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ಮಲಾ ಸೀತಾರಾಮನ್‌ ಜೂನ್‌ 12ರಂದು ಪತ್ರ ಬರೆದು, ಆಹ್ವಾನಿಸಿದ್ದರು.

ನಿರ್ಮಲಾ ಅವರಿಗೆ ಮಂಗಳವಾರ ಪತ್ರ ಬರೆದಿರುವ ಸಿದ್ದರಾಮಯ್ಯ, ‘ನನ್ನ ಬದಲಿಗೆ ಕೃಷ್ಣ ಬೈರೇಗೌಡ ಅವರು ರಾಜ್ಯದ ಪ್ರತಿನಿಧಿಯಾಗಿ ಬಜೆಟ್‌ ಪೂರ್ವಭಾವಿ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಜಿಎಸ್‌ಟಿಗೆ ಸಂಬಂಧಿಸಿದ ವಿಷಯಗಳನ್ನು ಕಂದಾಯ ಸಚಿವರೇ ನಿರ್ವಹಿಸುತ್ತಿರುವುದರಿಂದ ಅವರೇ ಚರ್ಚೆಯಲ್ಲಿ ಪಾಲ್ಗೊಳ್ಳುವರು’ ಎಂದು ತಿಳಿಸಿದ್ದರು.

ADVERTISEMENT

ದೆಹಲಿಗೆ ಶುಕ್ರವಾರ ತೆರಳಲಿರುವ ಕೃಷ್ಣ ಬೈರೇಗೌಡ, ಶನಿವಾರ ಬೆಳಿಗ್ಗೆ ಬಜೆಟ್‌ ಪೂರ್ವಭಾವಿ ಚರ್ಚೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 2ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯಲ್ಲೂ ಭಾಗವಹಿಸುವರು. ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿರುವ ಕಂದಾಯ ಸಚಿವರು, ಬಜೆಟ್‌ ಪೂರ್ವಭಾವಿ ಚರ್ಚೆ ಮತ್ತು ಜಿಎಸ್‌ಟಿ ಮಂಡಳಿ ಸಭೆಗಳಲ್ಲಿ ರಾಜ್ಯವು ಮಂಡಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.