ಕೆ.ಆರ್.ಪುರ: ವಿಜಯದಶಮಿ ಅಂಗವಾಗಿ ಕಾಡುಗೋಡಿ, ವೈಟ್‌ಫೀಲ್ಡ್ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಸಾಗಿ ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್ ನಗರ ಗುಟ್ಟದ ದಸರಾ ಮೈದಾನದಲ್ಲಿ ಸೇರುವ ಮೂಲಕ ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ಅಂಗವಾಗಿ ತಮ್ಮ ತಮ್ಮ ಗ್ರಾಮದ ದೇವಾಲಯಗಳಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಾಡುಗೋಡಿ ಸುತ್ತಮುತ್ತಲಿನ ಚನ್ನಸಂದ್ರ, ಎಕೆಜಿ ಕಾಲೊನಿ, ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ಪಟ್ಟಂದೂರು ಅಗ್ರಹಾರ, ದಿನ್ನೂರು, ಬೆಳ್ಳತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದೇವತೆಗಳನ್ನು ಮೆರವಣಿಗೆ ಮಾಡಲಾಯಿತು.
ಆಂಜನೇಯ ಸ್ವಾಮಿ, ಬಸವೇಶ್ವರಸ್ವಾಮಿ, ಶನಿಮಹಾತ್ಮ, ಮುನೇಶ್ವರ, ಮಾರಮ್ಮ, ಸಪಲಮ್ಮ, ಯಲ್ಲಮ್ಮ ಗಂಗಮ್ಮ ದೊಡ್ಡಮ್ಮ ಸೇರಿದಂತೆ ವಿವಿಧ ಗ್ರಾಮದೇವತೆಗಳನ್ನು ಪಲ್ಲಕ್ಕಿಗಳಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು.
ಗ್ರಾಮದೇವತೆಗಳ ಉತ್ಸವದಲ್ಲಿ ಡೊಳ್ಳು ಕುಣಿತ, ಕಂಸಾಳೆ ನೃತ್ಯ ತಮಟೆ ವಾದ್ಯ ಮತ್ತು ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಜಾತ್ರೆಯು ಸಾವಿರಾರು ಮಂದಿ ಸಾರ್ವಜನಿಕರನ್ನು ಆಕರ್ಷಿಸಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ, ಗ್ರಾಮಾಂತರ ಮಂಡಲ ಅದ್ಯಕ್ಷ ನಟರಾಜ್, ಮಾರಪ್ಪ, ಮಹೇಂದ್ರ ಮೋದಿ, ಎಲ್.ರಾಜೇಶ್, ನಲ್ಲೂರಹಳ್ಳಿ ಚಂದ್ರಶೇಖರ್ ರೆಡ್ಡಿ, ವರ್ತೂರು ಶ್ರೀಧರ್, ಮಧು, ಯೋಗೇಶ್ ಆರಾಧ್ಯ ಸೇರಿದಂತೆ ಸಾವಿರಾರು ಜನರು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.