ಬೆಂಗಳೂರು: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ತಮ್ಮ ‘ಪ್ರಭಾವ’ ಬೆಳೆಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೆ ಬ್ರಿಗೇಡ್ ಚಟುವಟಿಕೆಗೆ ಚಾಲನೆ ನೀಡಲು ಮುಂದಾಗಿದ್ದಾರೆಯೇ? ಇಂಥದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ‘ಬ್ರಿಗೇಡ್ ಪುನಃ ಆರಂಭವಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. ಬಾಗಲಕೋಟೆಯಲ್ಲಿ ಮದುವೆ ಕಾರ್ಯಕ್ರಮ ಇದೆ. ಅಲ್ಲಿಗೆ ಹೋಗುತ್ತಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ’ ಎಂದು ಹೇಳಿದ್ದಾರೆ.
ನಡೆದಿದ್ದೇನು?: ಬ್ರಿಗೇಡ್‌ನಲ್ಲಿ ಹಿಂದೆ ಸಕ್ರಿಯವಾಗಿದ್ದವರಿಗೆ ಕರೆ ಮಾಡಿದ್ದ ಈಶ್ವರಪ್ಪ, ಬಾಗಲಕೋಟೆಯಲ್ಲಿಸಭೆಗೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಈಶ್ವರಪ್ಪ ಅವರಿಗೆ ಕರೆ ಮಾಡಿದ ಬ್ರಿಗೇಡ್ ಅಧ್ಯಕ್ಷ, ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ವಿರೂಪಾಕ್ಷಪ್ಪ, ‘ನಿಮಗೆ ಬೇಕಾದಾಗ ಬ್ರಿಗೇಡ್ ಆರಂಭಿಸಲು ಅಥವಾ ಬಂದ್ಮಾಡಲು ನಮಗೇನು ಬೇರೆ ಕೆಲಸ ಇಲ್ಲವೇ. ಹಿಂದಿನ ವಿಧಾನಸಭೆಯಲ್ಲಿ ಕುರುಬ ಸಮುದಾಯದ 18 ಶಾಸಕರಿದ್ದರು. ಈಗ ಆ ಸಂಖ್ಯೆ ಕುಸಿದಿದೆ. ಬಿಜೆಪಿಯಿಂದ ಕುರುಬ ಸಮುದಾಯದ ಎಷ್ಟು ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ? ನಿಮಗೆ ಹೋಲಿಸಿದರೆ ಸಿದ್ದರಾಮಯ್ಯನವರೇ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಇಂತಹ ಕೆಲಸ ಬಿಟ್ಟು ಬಿಡಿ’ ಎಂದು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.
ಈ ಬೆಳವಣಿಗೆ ಬಳಿಕ ‘ಸಭೆಯನ್ನು ಮುಂದೂಡಲಾಗಿದೆ’ ಎಂದು ಸಂದೇಶ ರವಾನಿಸುವಂತೆ ಈಶ್ವರಪ್ಪ ಅವರೇ, ಬ್ರಿಗೇಡ್‌ನಲ್ಲಿ ಸಕ್ರಿಯರಾಗಿದ್ದ ಮುಧೋಳದ ಕಾಶೀನಾಥ ಹುಡೇದ ಅವರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಉದ್ದೇಶವೇನು?: ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ಮೊದಲು ಆಯನೂರು ಮಂಜುನಾಥ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಶಿವಮೊಗ್ಗದವರೇ ಆಗಿರುವ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದು, ಅದೇ ಸಮುದಾಯ ಮತ್ತು ಜಿಲ್ಲೆಗೆ ಸೇರಿರುವ ಆಯನೂರು ಅವರಿಗೆ ವಿರೋಧ ಪಕ್ಷದ ಸ್ಥಾನ ಸೂಕ್ತವಲ್ಲ ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ.
ಈ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹೆಸರು ಮುಂಚೂಣಿಗೆ ಬಂದಿದೆ. ಹಿಂದೆ ತಾವು ಪ್ರತಿನಿಧಿಸಿದ್ದ ನಾಯಕ ಸ್ಥಾನವನ್ನು ತಮ್ಮದೇ ಸಮುದಾಯಕ್ಕೆ ಸೇರಿದ ರಘುನಾಥ ಮಲ್ಕಾಪುರೆ ಅವರಿಗೆ ಕೊಡಿಸಬೇಕು ಎಂದು ಈಶ್ವರಪ್ಪ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಒತ್ತಡ ತಂತ್ರ ಹೇರಲು ಬ್ರಿಗೇಡ್ ಚಟುವಟಿಕೆಗೆ ಮತ್ತೆ ಚಾಲನೆ ನೀಡುವ ಕೆಲಸಕ್ಕೆಕೈ ಹಾಕಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.