ಬೆಂಗಳೂರು: ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ಶಾಂತ ಅವ್ವರೇಹಳ್ಳಿ ತಿಮ್ಮಯ್ಯ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಾಂತ ಅವ್ವೇರಹಳ್ಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಬಸವನಗುಡಿಯ ಪುಷ್ಪಾ ಎ.ಗಾವಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎನ್. ಶ್ರೀರಾಮ ರೆಡ್ಡಿ ಅವರ ವಾದ ಆಲಿಸಿದ ಬಳಿಕ ನ್ಯಾಯಪೀಠ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ, ‘ಈ ಕುರಿತಂತೆ ಮಾಹಿತಿ ಪಡೆದು ಸಲ್ಲಿಸಬೇಕು’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಆಕ್ಷೇಪವೇನು?: ‘ಶಾಂತ ಅವ್ವರೇಹಳ್ಳಿ ತಿಮ್ಮಯ್ಯ ಅವರು ಮಾಲಿನ್ಯ ಉಂಟು ಮಾಡುವ ಹಲವು ಕಂಪನಿಗಳ ಸಲಹೆಗಾರರಾಗಿದ್ದರು ಮತ್ತು ಅವರೇ ಸ್ವತಃ ಕಲವು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ನೇಮಕವಾಗುವ ಎರಡು ತಿಂಗಳ ಹಿಂದಷ್ಟೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ವೈಯಕ್ತಿಕ ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ಅವರ ನೇಮಕ ಕಾನೂನು ಬಾಹಿರವಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.