ಬೆಂಗಳೂರು: ಐಷಾರಾಮಿ ಬಸ್‌ಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ವಿತರಣೆಯನ್ನು ಗುರುವಾರದಿಂದ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ.
ನಿಗಮದ ಒಟ್ಟು 8,800 ಬಸ್‌ಗಳ ಪೈಕಿ 300 ಐಷಾರಾಮಿ ಬಸ್‌ಗಳಿವೆ. ನಾಲ್ಕು ನಿಗಮಗಳಿಂದ ಸೇರಿ 450 ಬಸ್‌ಗಳಲ್ಲಿ ಪ್ರತಿವರ್ಷ 1.20 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರಯಾಣಿಕರಿಗೆ ವಿತರಿಸಲಾಗುತ್ತಿತ್ತು.
ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಈ ನಿರ್ಧಾರ ಕೈಗೊಂಡಿದೆ. ಕುಡಿಯುವ ನೀರಿನ ಬಾಟಲಿಗಳನ್ನು ತರುವಂತೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಆನ್‌ಲೈನ್ ಟಿಕೆಟ್‌ನಲ್ಲೂ ಮುದ್ರಿಸಲಾಗುತ್ತಿದೆ ಎಂದು ನಿಗಮ ತಿಳಿಸಿದೆ.
‘ಸಿಬ್ಬಂದಿಗೆ ಪ್ರಶಸ್ತಿ: ನಿಗಮದ ನಿಲ್ದಾಣ, ಡಿಪೊ ಮತ್ತು ಬಸ್‍ಗಳಲ್ಲಿ ಸ್ವಚ್ಛತೆ ಕಾಪಾಡುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ‘ಸಾರಿಗೆ ಸ್ವಚ್ಛತಾ ಪ್ರಶಸ್ತಿ’ ಮತ್ತು ‘ಸಾರಿಗೆ ಪರಿಸರ ಪ್ರಶಸ್ತಿ’ ನೀಡುವ ಕಾರ್ಯಕ್ರಮವನ್ನು ಈ ವರ್ಷದಿಂದ ಜಾರಿಗೊಳಿಸಲಾಗಿದೆ. ಪ್ರತೀ ವರ್ಷ ಗಾಂಧಿ ಜಯಂತಿ ದಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಂಸ್ಥೆ ತಿಳಿಸಿದೆ.
ಐಷಾರಾಮಿ ಬಸ್‌ಗಳಲ್ಲಿ ಕಸದ ಚೀಲ ಇಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಮೂರು ತಿಂಗಳಿಗೊಮ್ಮೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪರಿಸರ ಜಾಗೃತಿ ಮೇಳ ಏರ್ಪಡಿಸಲಾಗುವುದು ಎಂದು ಹೇಳಿದೆ.
‘ಬಸ್ ನಿಲ್ದಾಣಗಳನ್ನು ಮತ್ತಷ್ಟು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ‘ಸ್ಯಾನಿಟರಿ ನ್ಯಾಪ್ಕಿನ್’ ಮಾರಾಟ ಯಂತ್ರ ಮತ್ತು ಇನ್‌ಸಿನರೇಟರ್‌ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಿಲ್ದಾಣಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು’ ಎಂದು ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ಪ್ಲಾಗ್ ರನ್ ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿಗಳು ಮತ್ತು ನಿಗಮದ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ 131 ಕೆ.ಜಿ ತ್ಯಾಜ್ಯ ಸಂಗ್ರಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.