ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿನ್ನಾಭರಣ ಬ್ಯಾಗ್ ಕಳ್ಳತನ

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:45 IST
Last Updated 6 ಮೇ 2024, 15:45 IST
ಕೆಎಸ್‌ಆರ್‌ಟಿಸಿ ಬಸ್‌
ಕೆಎಸ್‌ಆರ್‌ಟಿಸಿ ಬಸ್‌   

ಬೆಂಗಳೂರು: ನಗರದಿಂದ ಪಾವಗಡಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಏಪ್ರಿಲ್ 29ರಂದು ನಡೆದಿರುವ ಕಳ್ಳತನ ಸಂಬಂಧ ಮಹಿಳೆಯ ಮಗ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಸಾಗಿದ್ದ ರಸ್ತೆ ಹಾಗೂ ಇತರೆ ಸ್ಥಳಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ತುಮಕೂರು ಜಿಲ್ಲೆಯ ಪಾವಗಡದ ಮಹಿಳೆ, ಕೆಲಸ ನಿಮಿತ್ತ ಯಲಹಂಕದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ವಾಪಸು ಊರಿಗೆ ಹೋಗಲು ಯಲಹಂಕದಿಂದ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಏಪ್ರಿಲ್ 29ರಂದು ಬೆಳಿಗ್ಗೆ 6.20 ಗಂಟೆ ಸುಮಾರಿಗೆ ಬಂದಿದ್ದರು. ಅಲ್ಲಿಂದ, ಪಾವಗಡಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು.’

ADVERTISEMENT

‘ಬೆಳಿಗ್ಗೆ 11 ಗಂಟೆಗೆ ಬಸ್‌ ಪಾವಗಡ ತಲುಪಿತ್ತು. ನಿಲ್ದಾಣದಲ್ಲಿ ಇಳಿದಿದ್ದ ಮಹಿಳೆ, ಮನೆಗೆ ಹೋಗಿದ್ದರು. ಬ್ಯಾಗ್‌ ಪರಿಶೀಲಿಸಿದಾಗ, ಚಿನ್ನಾಭರಣ ಇರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಆರೋಪಿಗಳು ಕಳ್ಳತನ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ₹ 3.80 ಲಕ್ಷ ಮೌಲ್ಯದ ಚಿನ್ನಾಭರಣ ಬ್ಯಾಗ್‌ನಲ್ಲಿದ್ದವು ಎಂಬುದಾಗಿ ದೂರುದಾರರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.