ADVERTISEMENT

ಬೆಂಗಳೂರು–ಮೈಸೂರು ನಡುವೆ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 16:13 IST
Last Updated 16 ಜನವರಿ 2023, 16:13 IST
ಎಲೆಕ್ಟ್ರಿಕ್‌ ಬಸ್‌ಗೆ ಹತ್ತಿದ ಪ್ರಯಾಣಿಕರಿಗೆ ಹೂಗುಚ್ಛ ನೀಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸ್ವಾಗತಿಸಿದರು
ಎಲೆಕ್ಟ್ರಿಕ್‌ ಬಸ್‌ಗೆ ಹತ್ತಿದ ಪ್ರಯಾಣಿಕರಿಗೆ ಹೂಗುಚ್ಛ ನೀಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸ್ವಾಗತಿಸಿದರು   

ಬೆಂಗಳೂರು: ಕೆಎಸ್‌ಆರ್‌ಟಿಸಿ ‘ಪವರ್ ಪ್ಲಸ್‌’ ಎಲೆಕ್ಟ್ರಿಕ್ ಬಸ್‌ ಸಂಚಾರ ಆರಂಭಿಸಿದ್ದು, ಸೋಮವಾರ ಬೆಂಗಳೂರು–ಮೈಸೂರು ನಡುವೆ ಮೊದಲ ಕಾರ್ಯಾಚರಣೆ ನಡೆಸಿತು.

ಬೆಳಿಗ್ಗೆ 6.50ಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಿಂದ 15 ಪ್ರಯಾಣಿಕರೊಂದಿಗೆ ಹೊರಟಿತು. ಮೊದಲ ಟ್ರಿಪ್‌ನಲ್ಲಿ ಬಸ್ ಹತ್ತಿದ ಎಲ್ಲಾ ಪ್ರಯಾಣಿಕರಿಗೆ ಹೂಗುಚ್ಛ ನೀಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸ್ವಾಗತಿಸಿದರು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ 20 ಪ್ರಯಾಣಿಕರನ್ನು ಹತ್ತಿಸಿಕೊಂಡು 7.35ಕ್ಕೆ ಹೊರಟು ಬಸ್, 9.45ಕ್ಕೆ ಮೈಸೂರು ಬಸ್ ನಿಲ್ದಾಣಕ್ಕೆ ತಲುಪಿತು.

ಮೈಸೂರು ಬಸ್ ನಿಲ್ದಾಣದಿಂದ 12.10ಕ್ಕೆ 35 ಪ್ರಯಾಣಿಕರೊಂದಿಗೆ ಹೊರಟು, 2.20ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿತು. 2.45ಕ್ಕೆ ಕೆಂಪೇಗೌಡ ಬಸ್ ನಿಲ್ದಾಣ ತಲುಪಿತು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

‘ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಇಲ್ಲದ ಐಷಾರಾಮಿ ಬಸ್‌ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ₹300 ದರದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಈ ಬಸ್‌ನಲ್ಲಿ ಪ್ರಯಾಣ ಮಾಡುವುದು ವಿಶೇಷ ಅನುಭವ ನೀಡುತ್ತಿದೆ’ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಯ ಒಂದು ಬಸ್ ಕಾರ್ಯಾಚರಣೆ ಆರಂಭಿಸಿದ್ದು, ಫೆಬ್ರುವರಿಯಲ್ಲಿ ಎಲ್ಲಾ 50 ಎಲೆಕ್ಟ್ರಿಕ್ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಲಿವೆ. ಬಳಿಕವೇ ಆನ್‌ಲೈನ್‌ನಲ್ಲಿ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.