ADVERTISEMENT

₹7,500 ಕನಿಷ್ಠ ಪಿಂಚಣಿ ನೀಡಲು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 15:50 IST
Last Updated 27 ಮಾರ್ಚ್ 2024, 15:50 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸದಸ್ಯರು ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸದಸ್ಯರು ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.    ಪ್ರಜಾವಾಣಿ ಚಿತ್ರ

ಬೆಂಗಳೂರು: ಕನಿಷ್ಠ ₹7,500 ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸದಸ್ಯರು ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಕೇಂದ್ರ ಸರ್ಕಾರ ನಿವೃತ್ತ ನೌಕರರ ಕನಿಷ್ಠ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸುಪ್ರೀಂ ಕೋರ್ಟ್‌ 17 ತಿಂಗಳ ಹಿಂದೆ ಸುನೀಲ್‌ ಕುಮಾರ್‌ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಕೇಂದ್ರೀಯ ಇಪಿಎಫ್‌ಒ ಅಧಿಕಾರಿಗಳು ಅನುಷ್ಠಾನಗೊಳಿಸುತ್ತಿಲ್ಲ. ಇದರಿಂದ, ನಿವೃತ್ತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿವೃತ್ತರಿಂದ ಸಂಗ್ರಹಿಸುವ ಮೊತ್ತ ಮತ್ತು ನೀಡುವ ಪಿಂಚಣಿ ನಡುವೆ ಅಜಗಜಾಂತರವಿದ್ದು, ಇಲ್ಲಿಯೂ ವಂಚನೆ ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ನಿವೃತ್ತ ನೌಕರರಲ್ಲಿ ಹೆಚ್ಚಿನವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಈಗ ನೀಡುತ್ತಿರುವ ಪಿಂಚಣಿಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ‍ಪಿಂಚಣಿ ಹೆಚ್ಚಿಸಿ‌ ಜೊತೆಗೆ ವೈದ್ಯಕೀಯ ಸೌಲಭ್ಯ ಸೇರಿ ಇತರೆ ಸವಲತ್ತುಗಳನ್ನು ನೀಡಬೇಕು ’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ಬಂದ ಪ್ರಾದೇಶಿಕ ಭವಿಷ್ಯ ನಿಧಿ ಅಧಿಕಾರಿಗಳು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ’ತಮ್ಮ ಮನವಿಯನ್ನು ಸಚಿವರ ಕಾರ್ಯಾಲಯಕ್ಕೆ ಮುಂದಿನ ಕ್ರಮಕ್ಕಾಗಿ ಕಳುಹಿಸಿ ಕೊಡಲಾಗುವುದು‘ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಂಕರ್ ಕುಮಾರ್, ಕಾರ್ಯಾಧ್ಯಕ್ಷ ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಡೋಲಪ್ಪ ಸೇರಿದಂತೆ ನೂರಾರು ಪ್ರತಿಭಟನಕಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.