ಬೆಂಗಳೂರು: ಜೋಗ ಜಲಪಾತ, ಭರಚುಕ್ಕಿ–ಗಗನಚುಕ್ಕಿಗಳಿಗೆ ಕೆಎಸ್‌ಆರ್‌ಟಿಸಿಯು ವಾರಾಂತ್ಯದ ಪ್ಯಾಕೇಜ್ ಟೂರ್ ಯೋಜನೆ ರೂಪಿಸಿದೆ.
ಜೋಗಕ್ಕೆ: ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 5ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ, ಉಪಾಹಾರ ಮುಗಿಸಿ ವರದಹಳ್ಳಿಗೆ, ಅಲ್ಲಿಂದ ವರದಮೂಲ, ಇಕ್ಕೇರಿ, ಕೆಳದಿ ಸುತ್ತಾಡಿಕೊಂಡು ಮತ್ತೆ ಮಧ್ಯಾಹ್ನದ ಊಟಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿಂದ ಜೋಗಕ್ಕೆ ತೆರಳಿ ಸಂಜೆ 7ಕ್ಕೆ ಮತ್ತೆ ಸಾಗರಕ್ಕೆ ಬಂದು ಶಾಪಿಂಗ್, ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಹೊರಡಲಿದೆ. ಮರುದಿನ ಬೆಳಿಗ್ಗೆ 5ಕ್ಕೆ ಬೆಂಗಳೂರಿಗೆ ತಲುಪಲಿದೆ. ಮೊದಲ ಪ್ರವಾಸ ಆ.11ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ ₹ 2,500, ಮಕ್ಕಳಿಗೆ ₹ 2,300 ಪ್ರಯಾಣದರ ನಿಗದಿ ಮಾಡಲಾಗಿದೆ.
ಗಗನಚುಕ್ಕಿ ಕಡೆಗೆ: ಬೆಂಗಳೂರಿನಿಂದ ಬೆಳಿಗ್ಗೆ 6.30ಕ್ಕೆ ಹೊರಟು ಮದ್ದೂರಿನಲ್ಲಿ ಉಪಾಹಾರಕ್ಕೆ ನಿಲ್ಲಿಸಲಾಗುತ್ತದೆ. ಅಲ್ಲಿಂದ ಸೋಮನಾಥಪುರಕ್ಕೆ ತೆರಳಿ, ತಲಕಾಡು ತಲುಪಲಿದೆ. ಅಲ್ಲಿ ಮಧ್ಯಾಹ್ನದ ಊಟದ ವಿರಾಮ ಇರಲಿದೆ. ಮುಂದೆ ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಿಸಿ ಸಂಜೆ 6.15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ.
ಊಟ– ಉಪಾಹಾರ ಹೊರತುಪಡಿಸಿ ವಯಸ್ಕರಿಗೆ ₹ 450, ಮಕ್ಕಳಿಗೆ ₹ 300 ದರ ಇರಲಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 7760990287, 7760990988 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.