ADVERTISEMENT

ಬೆಂಗಳೂರು: ಆಗಸ್ಟ್ 17-18ರಂದು ಕುಂದಾಪ್ರ ಕನ್ನಡ ಹಬ್ಬ, ಇಲ್ಲಿದೆ ವಿವರ

* ಐದನೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ * ಜೋಡಾಟ-ರಥೋತ್ಸವ ಸೇರಿ ಹಲವು ಆಕರ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜುಲೈ 2024, 16:20 IST
Last Updated 7 ಜುಲೈ 2024, 16:20 IST
<div class="paragraphs"><p>ಕುಂದಾಪ್ರ ಕನ್ನಡ ಹಬ್ಬದ ಕುರಿತು ಜು. 7ರಂದು ಹಮ್ಮಿಕೊಂಡಿದ್ದ 'ವಾಲ್ಗ' ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು.</p></div>

ಕುಂದಾಪ್ರ ಕನ್ನಡ ಹಬ್ಬದ ಕುರಿತು ಜು. 7ರಂದು ಹಮ್ಮಿಕೊಂಡಿದ್ದ 'ವಾಲ್ಗ' ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು.

   

ಬೆಂಗಳೂರು: ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದು, ಈ ಸಲ ಬೆಂಗಳೂರಿನಲ್ಲಿ ಅದು ಎಂದಿಗಿಂತ ಅದ್ಧೂರಿಯಾಗಿ ನಡೆಯಲಿದೆ.

ಈ ಬಾರಿ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನೆರವೇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

ADVERTISEMENT

'ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು' ಮೂಲಕ ಆಯೋಜನೆ ಆಗುತ್ತಿರುವ ಈ ಆಚರಣೆಯ ದಿನ-ಸ್ಥಳ ಘೋಷಣೆ ಕುರಿತು ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ 'ವಾಲ್ಗ' ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಆರು ವರ್ಷಗಳ ಹಿಂದೆ ಈ ಆಚರಣೆ ಆರಂಭವಾಗಿದ್ದು, ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಗಿದೆ.

ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

ಬೃಹತ್ ಮೆರವಣಿಗೆ: ಎರಡು ದಿನಗಳ ಈ ಕಾರ್ಯಕ್ರಮ 'ದಿಬ್ಣ'ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. 'ನಾಕ್ ಘನಾ ಸುರ್ಲ್' ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ 'ನುಡಿ ಚಾವಡಿ' ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ 'ಜೋಡಾಟ' ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ ಎಂದರು.

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್.ಉಪೇಂದ್ರ ಶೆಟ್ಟಿ, ಹೋಟೆಲೋದ್ಯಮಿ ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.
ಇದು ಸಣ್ಣ ಆಲೋಚನೆ ಅಲ್ಲ‌. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನ.
- ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ.

2 ದಿನಗಳ ಕಾರ್ಯಕ್ರಮಗಳ ಪಟ್ಟಿ

  • 'ಹಂದಾಡ್ತ ನೆಗ್ಯಾಡಿ': ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.

  • 'ಬಯಲಾಟ': ಗ್ರಾಮೀಣ ಕ್ರೀಡೋತ್ಸವ

  • 'ರಥೋತ್ಸವ': ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.

  • 'ಪೆಟ್ಟ್ ಒಂದೇ, ಸ್ವರ ಬೇರೆ': ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.

  • 'ಭುಜಬಲದ ಪರಾಕ್ರಮ' ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.

  • 'ಯಬ್ಯಾ ಸೌಂಡೇ': ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ

  • 'ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್': ವಿಶೇಷ ನೃತ್ಯ‌ ಪ್ರದರ್ಶನ

  • 'ಗಂಡಿನ್ ಪಿಚ್ಚರ್ ಬಿಡ್ತ್': ವಿಶೇಷ ಕಿರುಚಿತ್ರ ಪ್ರದರ್ಶನ

  • 'ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್': ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.

  • 'ಕುಂದಾಪ್ರ ಸಂತಿ': ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.

  • 'ಹೊಟ್ಟಿ ಕಂಡದ್ ನಾವೇ ಸೈ': ಕರಾವಳಿಯ ವಿಶೇಷ ಖಾದ್ಯ ಮೇಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.