ADVERTISEMENT

ಕುಂದಾಪ್ರ ಕನ್ನಡ ಹಬ್ಬಕ್ಕೆ ಸಂಭ್ರಮದ ಚಾಲನೆ

ಕಾಂತಾರ ನಟ ರಿಷಬ್‌ ಶೆಟ್ಟಿಗೆ ಊರ ಗೌರವ– ಮನಸೆಳೆದ ಗಾಯನ, ಜೋಡಾಟ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 16:02 IST
Last Updated 17 ಆಗಸ್ಟ್ 2024, 16:02 IST
ನಗರದಲ್ಲಿ ಶನಿವಾರ ಆರಂಭಗೊಂಡಿರುವ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿದ್ದ ವಿವಿಧ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಅದರ ಫೋಟೊ ತೆಗೆದು ಸಂಭ್ರಮಿಸಿದರು.
ನಗರದಲ್ಲಿ ಶನಿವಾರ ಆರಂಭಗೊಂಡಿರುವ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿದ್ದ ವಿವಿಧ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಅದರ ಫೋಟೊ ತೆಗೆದು ಸಂಭ್ರಮಿಸಿದರು.   

ಬೆಂಗಳೂರು: ಭಾವ ಬೀದಿಯಲಿ ಭಾಷೆಯ ತೇರು ‘ಕುಂದಾಪ್ರ ಕನ್ನಡ ಹಬ್ಬ’ ಶನಿವಾರ ನಗರದ ಅರಮನೆ ಮೈದಾನದಲ್ಲಿ ಸಂಭ್ರಮದಿಂದ ಆರಂಭಗೊಂಡಿತು. ಭಾನುವಾರವೂ ನಡೆಯಲಿದೆ.

ಮಂಗಳೂರು ಜರ್ನಿ ಥೇಟರ್‌ ಗ್ರೂಪ್‌ ಕಲಾವಿದರು ನಡೆಸಿಕೊಟ್ಟ ಜನಪದ ಗೀತೆ, ರಂಗಗೀತೆ, ಕನ್ನಡ ಗೀತೆಗಳ ಗಾಯನ ಮನಸೂರೆಗೊಂಡಿತು. ಕರಾವಳಿಯ ಪ್ರಸಿದ್ಧ ಕಲಾವಿದರ ಜೋಡಾಟವು ಹಬ್ಬಕ್ಕೆ ರಂಗು ನೀಡಿತು.

ಹಬ್ಬದಲ್ಲಿ ಊರ ಗೌರವ ಸ್ವೀಕರಿಸಿದ ನಟ ರಿಷಬ್‌ ಶೆಟ್ಟಿ, ‘ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೂಲಬೇರುಗಳನ್ನು ಮರೆಯಬಾರದು. ಕುಂದಾಪ್ರ ಮಣ್ಣಿನಲ್ಲಿ ಹುಟ್ಟಿದ್ದರಿಂದ ನನಗೆ ಸಿನಿಮಾಗಳಲ್ಲಿ ನೆಲಮೂಲ ಸಂಸ್ಕೃತಿ ನೀಡಲು ಸಾಧ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು, ‘ಆಧುನಿಕತೆ ಭರಾಟೆಯಲ್ಲಿ ಕುಂದಾಪ್ರ ಭಾಷೆ ಉಳಿಯುವುದೇ ಎಂಬ ಶಂಕೆ ಇದೆ. ಕೃಷಿಯಲ್ಲಿ ಹಿಂದೆ ಬಳಸುತ್ತಿದ್ದ ಬಹಳಷ್ಟು ಶಬ್ದಗಳು ಇಂದಿನ ಪೀಳಿಗೆಗೆ ಪರಿಚಯವೇ ಇಲ್ಲ. ಇಂಥ ಕಾಲದಲ್ಲಿ ಕುಂದಾಪ್ರ ಕನ್ನಡ ಹಬ್ಬದ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಮತ್ತು ವಿಶ್ವಕ್ಕೆ ಪರಿಚಯಿಸುವ ಕಾರ್ಯವೂ ಆಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ದೀಪಕ್‌ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್‌, ಕೋಶಾಧಿಕಾರಿ ವಿಜಯ್‌ ಶೆಟ್ಟಿ ಹಾಲಾಡಿ, ಜೊತೆ ಕಾರ್ಯದರ್ಶಿ ಅಜಿತ್‌ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕ ಗುರುರಾಜ್‌ ಗಂಟಿಹೊಳೆ, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಂ.ಎಸ್‌. ಮಂಜ ಚಾರಿಟಬಲ್‌ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ಉದ್ಯಮಿಗಳಾದ ಕಿಶೋರ್‌ ಕುಮಾರ್ ಹೆಗ್ಡೆ ಕೈಲ್ಕೇರಿ, ಅಂಜಲೀನಾ, ಶಿವರಾಮ ಹೆಗ್ಡೆ, ಸತೀಶ್‌ ಶೆಟ್ಟಿ ಭಾಗವಹಿಸಿದ್ದರು.

ನಗರದಲ್ಲಿ ಶನಿವಾರ ಆರಂಭಗೊಂಡಿರುವ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿದ್ದ ವಿವಿಧ ಪ್ರದರ್ಶನಗಳನ್ನು ಜನರು ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.