ADVERTISEMENT

ಕುಂದು ಕೊರತೆ | ಕಿತ್ತು ಹೋದ ಕಾಂಕ್ರೀಟ್‌ ಸ್ಲ್ಯಾಬ್‌ಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 17:41 IST
Last Updated 10 ನವೆಂಬರ್ 2024, 17:41 IST
ಕೆ.ಆರ್. ಪುರದ ಚರಂಡಿಗೆ ಹಾಕಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಕಿತ್ತು ಹೋಗಿರುವುದು
ಕೆ.ಆರ್. ಪುರದ ಚರಂಡಿಗೆ ಹಾಕಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಕಿತ್ತು ಹೋಗಿರುವುದು   

‘ಕಿತ್ತು ಹೋದ ಕಾಂಕ್ರೀಟ್‌ ಸ್ಲ್ಯಾಬ್‌ಗಳು’

ಕೃಷ್ಣರಾಜಪುರದ ಏಳನೇ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿಗೆ ಹಾಕಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಕಿತ್ತು ಹೋಗಿವೆ. ಇದರಿಂದ, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಕೆಲ ದಿನಗಳ ಹಿಂದೆ ಜಲಮಂಡಳಿ ಸಿಬ್ಬಂದಿ ಪೈಪ್‌ಗಳನ್ನು ಅಳವಡಿಸಲು ಈ ಸ್ಲ್ಯಾಬ್‌ಗಳನ್ನು ಕಿತ್ತು ಹಾಕಿದ್ದರು. ಪಾದಚಾರಿಗಳ ಓಡಾಟಕ್ಕೂ ಸಮಸ್ಯೆ ಆಗಿದೆ. ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಚರಂಡಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.

- ಕೆ.ಎಸ್.ವಿಜಯ್ ಕುಮಾರ್, ಕೆ.ಆರ್. ಪುರ

ADVERTISEMENT

‘ತ್ಯಾಜ್ಯ ತುಂಬಿದ ಚೀಲಗಳನ್ನು ತೆರವುಗೊಳಿಸಿ’

ಉತ್ತರಹಳ್ಳಿ ಕೆಎಸ್‌ಆರ್‌ಟಿಸಿ ಬಡಾವಣೆಯ ಗಾಂಧಿ ಉದ್ಯಾನದ ಮುಂಭಾಗದಲ್ಲಿ ಪ್ರತಿದಿನ ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿ ಕಸ ತುಂಬಿದ ಚೀಲಗಳನ್ನು ಉದ್ಯಾನದ ಮುಂಭಾಗದಲ್ಲಿ ಹಾಕುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಹಾಗೂ ಇದರ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಬಿಎಂಪಿ ಅಧಿಕಾರಿಗಳು ಉದ್ಯಾನದ ಮುಂಭಾಗದಲ್ಲಿ ಹಾಕಿರುವ ಕಸದ ಚೀಲಗಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಿಬೇಕು. ಮತ್ತೆ ಇಲ್ಲಿ ಕಸ ಹಾಕದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಬೇಕು.

- ಎನ್.ಆರ್. ಮೂರ್ತಿ, ಉತ್ತರಹಳ್ಳಿ

‘‍ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’

ನಾಗರಬಾವಿಯ ಮುಖ್ಯ ರಸ್ತೆಯ ಮಾರುತಿನಗರದ ಬಳಿ ಇರುವ ಮಾರುತಿ ಮಂದಿರದ ಸಮೀಪ ಕಸದ ರಾಶಿ ಬಿದ್ದಿದೆ. ಸ್ಥಳೀಯ ನಿವಾಸಿಗಳು ರಾತ್ರಿ ಸಮಯದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಮನೆಯಿಂದ ತ್ಯಾಜ್ಯ ತುಂಬಿಕೊಂಡು ತಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಈ ಕಸದ ರಾಶಿಯನ್ನು ನಾಯಿ, ಬೀಡಾಡಿ ದನಗಳು ಎಳೆದು ಮುಖ್ಯರಸ್ತೆಗೆ ತರುತ್ತಿದ್ದು ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಇಲ್ಲಿನ ಕಸ ತೆರವುಗೊಳಿಸಿ, ಈ ಪ್ರದೇಶದಲ್ಲಿ ತ್ಯಾಜ್ಯ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ಕೈ ಜೋಡಿಸಬೇಕು.

- ಜಿ.ಆರ್.ಕೆ. ನಾಯಕ್, ನಾಗರಬಾವಿ

‘ಪಾದಚಾರಿ ಮಾರ್ಗದಲ್ಲಿ ವ್ಯಾಪಾರ–ವಹಿವಾಟು’

ಜಯನಗರದ ನಾಲ್ಕನೇ ಬಡಾವಣೆಯ ಸಂಕೀರ್ಣ ಮಳಿಗೆಗಳ ಪಕ್ಕದಲ್ಲಿರುವ ಪಾದಚಾರಿ ಮಾರ್ಗವನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡು ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಕೆಲ ದಿನಗಳ ಹಿಂದೆ ಇಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ವಾಹನ ಸಂಚಾರಕ್ಕೂ ಸಮಸ್ಯೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಾದಚಾರಿ ಮಾರ್ಗವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

- ಎಚ್.ವಿ. ಶ್ರೀಧರ್, ಎಚ್ಎಸ್ಆರ್ ಬಡಾವಣೆ

ಗಾಂಧಿ ಉದ್ಯಾನದ ಮುಂಭಾಗದಲ್ಲಿ ಹಾಕಿರುವ ತ್ಯಾಜ್ಯ ತುಂಬಿದ ಚೀಲಗಳು
ನಾಗರಬಾವಿ ಮಾರುತಿ ಮಂದಿರದ ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಕಸದ ರಾಶಿ
ಜಯನಗರದ ನಾಲ್ಕನೇ ಬಡಾವಣೆಯ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.