ADVERTISEMENT

ಕುಂದು ಕೊರತೆ: ರಸ್ತೆ ದುರಸ್ತಿಗೆ ಜನರ ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 19:43 IST
Last Updated 24 ಡಿಸೆಂಬರ್ 2023, 19:43 IST
ಬನಶಂಕರಿಯಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ
ಬನಶಂಕರಿಯಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ   

‘ರಸ್ತೆ ಅಭಿವೃದ್ಧಿಪಡಿಸಿ’

ಬನಶಂಕರಿ 6ನೇ ಹಂತದ 4ನೇ ಟಿ ಬ್ಲಾಕ್‌ನಿಂದ ಶಂಕರ ಲೇಕ್‌ ವ್ಯೂ ಲೇಔಟ್ ಮೂಲಕ ಕನಕಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಣ್ಣಿನಿಂದ ಕೂಡಿರುವ ಇಲ್ಲಿನ ರಸ್ತೆಗೆ ಡಾಂಬರು ಹಾಕಿಲ್ಲ. ಇದರಿಂದ, ವಾಹನ ಸವಾರರಿಗೆ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವಿದ್ಯುತ್ ದೀಪದ ಸೌಕರ್ಯವಿಲ್ಲದ ಕಾರಣ ರಾತ್ರಿ ವೇಳೆ ಭಯದಲ್ಲಿ ಓಡಾಡುವ ಅನಿವಾರ್ಯ ಎದುರಾಗಿದೆ. ಬೆಸ್ಕಾಂ ಮತ್ತು ಬಿಡಿಎ ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ರಾ. ಜಯಸಿಂಹ, ಸ್ಥಳೀಯ ನಿವಾಸಿ

ADVERTISEMENT

***

‘ರಸ್ತೆ ದುರಸ್ತಿಗೊಳಿಸಿ’

ಜೆ.ಪಿ. ನಗರದ 6ನೇ ಹಂತದ 38ನೇ ಅಡ್ಡರಸ್ತೆ ಗುಂಡಿಗಳಿಂದ ಕೂಡಿದೆ. ಇದರಿಂದ ವಾಹನ ಸಂಚಾರಕ್ಕೆ ಅನನಕೂಲವಾಗಿದೆ. ಕಳೆದ ಮೂರು ವರ್ಷಗಳಿಂದ ಈ ರಸ್ತೆ ದುರಸ್ತಿ ಕಂಡಿಲ್ಲ. ರಸ್ತೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಆರು ತಿಂಗಳ ಹಿಂದೆಯೇ ಈ ರಸ್ತೆಗೆ ಜಲ್ಲಿಕಲ್ಲು ಹಾಕಲಾಗಿದೆ. ಆದರೆ, ಡಾಂಬರೀಕರಣ ಮಾಡಿಲ್ಲ. ಇದರಿಂದ, ವಾಹನ ಸವಾರರು ಪರದಾಡುತ್ತಿದ್ದಾರೆ. ಇಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ, ಬಡಾವಣೆಯ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

-ಗಣೇಶ್, ಸ್ಥಳೀಯ ನಿವಾಸಿ

***

‘ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ’

ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಸ ಹಾಕಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ದ್ವಿಚಕ್ರ ವಾಹನ ಸವಾರರು ಪ್ಲಾಸ್ಟಿಕ್‌ ಚೀಲಗಳಲ್ಲಿ ಮನೆ ತ್ಯಾಜ್ಯ ತುಂಬಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಸದ್ಯ ಇದು ಕಸ ಹಾಕುವ ತಿಪ್ಪೆಗುಂಡಿಯಾಗಿ ಮಾರ್ಪಟ್ಟಿದ್ದು, ಇಡೀ ಪ್ರದೇಶವೆಲ್ಲ ಗಬ್ಬೆದ್ದು ನಾರುತ್ತಿದೆ. ಕಸದ ಚೀಲಗಳಲ್ಲಿರುವ ಆಹಾರ ತಿನ್ನಲು ಬೀಡಾಡಿ ದನಗಳು, ನಾಯಿಗಳ ದಂಡು ಒಂದೆಡೆ ಸೇರುತ್ತವೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಆದ್ದರಿಂದ, ಇಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ದಂಡ ಹಾಕಬೇಕು. ಜೊತೆಗೆ ಇಲ್ಲಿ ಹಾಕಿರುವ ಕಸ ಕೂಡಲೇ ವಿಲೇವಾರಿ ಮಾಡಬೇಕು.

-ರಾಮೇಗೌಡ, ಸ್ಥಳೀಯ ನಿವಾಸಿ

***

‘ವಿಜಯನಗರ: ಆಸನ ಸರಿಪಡಿಸಿ’

ವಿಜಯನಗರದ ಹೊಸಹಳ್ಳಿ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಬಿಎಂಟಿಸಿ ಬಸ್‌ ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನ ಮುರಿದು ಬಿದ್ದಿದೆ. ಇದರಿಂದ, ವೃದ್ಧರು, ಮಕ್ಕಳು, ಮಹಿಳೆಯರು ನಿಂತುಕೊಂಡೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆಸನದ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

-ಆರ್.ಕೆ.ನಾಯಕ್, ಸ್ಥಳೀಯ ನಿವಾಸಿ

***

‘ಬೀದಿ ದೀಪ ಅಳವಡಿಸಿ’

ವಿದ್ಯಾರಣ್ಯಪುರ ಬಸ್ ಟರ್ಮಿನಲ್‌ನಿಂದ ದೇವಿ ವೃತ್ತ, ಯಲಹಂಕ, ಎಂ.ಎಸ್. ಪಾಳ್ಯ ಕಡೆಗೆ ಹೋಗುವ ರಸ್ತೆಗೆ ಬೀದಿ ದೀಪಗಳೇ ಇಲ್ಲ. ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ರಸ್ತೆಯು ಕಿರಿದಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ನಾಗರಿಕರು ಕತ್ತಲಿನಲ್ಲಿಯೇ ಓಡಾಡುವ ಪರಿಸ್ಥಿತಿ ಇದೆ. ಅಪಘಾತಗಳು ಸಂಭವಿಸುವ ಮುನ್ನ ಅಧಿಕಾರಿಗಳು ಇಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. 

-ಪ್ರಶಾಂತ್ ಕೊಡನಾಡ, ಸ್ಥಳೀಯ ನಿವಾಸಿ

***

‘ತುಕ್ಕು ಹಿಡಿದ ಆಟಿಕೆಗಳು’

ಬಿಬಿಎಂಪಿ ವಾರ್ಡ್‌ ಸಂಖ್ಯೆ 40ರ ವ್ಯಾಪ್ತಿಯಲ್ಲಿ ಬರುವ ತಿಪ್ಪೇನಹಳ್ಳಿಯ ಕಾಲಭೈರವನಗರದ ಉದ್ಯಾನದಲ್ಲಿ ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇಲ್ಲಿನ ಜಾರುಬಂಡೆಯ ಕಬ್ಬಿಣ್ಣ ಕಿತ್ತು ಹೋಗಿದ್ದು, ಮೇಲಿಂದ ಯಾರಾದರೂ ಮಕ್ಕಳು ಹತ್ತಿ ಜಾರಿದರೆ ಕಬ್ಬಿಣ ದೇಹಕ್ಕೆ ತಾಗುವಂತಿದೆ. ಇದರಿಂದ ಹಲವು ಮಕ್ಕಳು ಗಾಯ ಮಾಡಿಕೊಂಡಿದ್ದಾರೆ. ಉದ್ಯಾನದಲ್ಲಿ ಬಹುತೇಕ ಆಟಿಕೆಗಳು ತುಕ್ಕು ಹಿಡಿದಿವೆ. ಇದರಿಂದ, ಮಕ್ಕಳೊಂದಿಗೆ ಉದ್ಯಾನಕ್ಕೆ ಬರುವ ಸ್ಥಳೀಯ ನಿವಾಸಿಗಳಿಗೆ ನಿರಾಶೆಯಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿನ ಉದ್ಯಾನ ಆಟಿಕೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

-ರವಿಚಂದ್ರ, ಸ್ಥಳೀಯ ನಿವಾಸಿ

ಜೆ.ಪಿ. ನಗರದ 38ನೇ ಅಡ್ಡರಸ್ತೆಯಲ್ಲಿ ಹಾಕಿರುವ ಜಲ್ಲಿಕಲ್ಲು ಹಾಗೂ ಕಸ
ಪಾದಚಾರಿ ಮಾರ್ಗದಲ್ಲಿ ಹಾಕಿರುವ ಕಸ
ಬಿಎಂಟಿಸಿ ಬಸ್‌ ತಂಗುದಾಣದ ಆಸನ ಬಾಗಿರುವುದು
ವಿದ್ಯಾರಣ್ಯಪುರ ಬಸ್‌ ನಿಲ್ದಾಣದಿಂದ ಎಂ.ಎಸ್. ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೀದಿ ದೀಪ ಇಲ್ಲ
ಕಬ್ಬಿಣದ ಜಾರುಬಂಡಿ ಕಿತ್ತು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.