ADVERTISEMENT

ಕನಿಷ್ಠ ಬೆಂಬಲ ಬೆಲೆಗೆ ಶಾಸನಬದ್ಧ ಕಾನೂನು ರೂಪಿಸಿ: ಕುರುಬೂರು ಶಾಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 14:32 IST
Last Updated 26 ಜೂನ್ 2024, 14:32 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಬೆಂಗಳೂರು: ‘ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಶಾಸನಬದ್ಧ ಕಾನೂನು ರೂಪಿಸಿ ಜಾರಿಗೊಳಿಸಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಭತ್ತಕ್ಕೆ ₹3,100 ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ₹2,300 ಬೆಂಬಲ ಬೆಲೆ ನಿಗದಿಪಡಿಸಿದೆ. ಆದ್ದರಿಂದ ಎಂಎಸ್‌ಪಿಗೆ ಕಾನೂನು ರೂಪಿಸುವಂತೆ ದೇಶದಾದ್ಯಂತ ರೈತರು ಹೋರಾಟ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ತೆಲಂಗಾಣದಲ್ಲಿ ₹2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಲಾಗುತ್ತಿದೆ. ಜೊತೆಗೆ ವಾರ್ಷಿಕ ಒಂದು ಎಕರೆ ಭೂಮಿ ಹೊಂದಿರುವ ರೈತರಿಗೆ ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ತೀವ್ರ ಬರಗಾಲವಿದ್ದಾಗಲೂ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಕಿಸಾನ್‌ ಸಮ್ಮಾನ್‌ ಯೋಜನೆಯ ಮೂಲಕ ರೈತರಿಗೆ ನೀಡುತ್ತಿದ್ದ ₹4 ಸಾವಿರ ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ’ ಎಂದು ದೂರಿದರು.

ADVERTISEMENT

‘ಸರ್ಕಾರ ರೈತರ ಹೆಸರಿನಲ್ಲಿ ಹಾಲಿನ ದರ ಹೆಚ್ಚಳ ಮಾಡಿದೆ. ಆದರೆ, ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ₹5 ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತಿಲ್ಲ’ ಎಂದು ಹೇಳಿದರು.‌

ಕೇರಳ ರಾಜ್ಯದ ರೈತ ಮುಖಂಡ ಕೆ.ವಿ. ಬಿಜು, ‘ಕೇಂದ್ರ ಸರ್ಕಾರ ಅಡುಗೆಗೆ ಬಳಸುವ ತಾಳೆ ಹಾಗೂ ಸೋಯಾಬಿನ್‌ ಎಣ್ಣೆಯ ಆಮದು ತೆರಿಗೆಯನ್ನು ಶೇ 5.5ರಷ್ಟು ಕಡಿತಗೊಳಿಸಿದೆ. ಇದರ ಪರಿಣಾಮ ತೆಂಗು ಬೆಳೆಗಾರರು ಹಾಗೂ ರೈತರ ಮೇಲಾಗಿದ್ದು, ಅವರು ತೀವ್ರ ಸಂಕಷ್ಟದಲ್ಲಿದ್ದಾರೆ’ ಎಂದು ಹೇಳಿದರು. 

ಹರಿಯಾಣದ ರೈತ ಮುಖಂಡರಾದ ಲಕ್ವಿಂದರ್ ಸಿಂಗ್, ಅಭಿಮನ್ಯೂ ಕೊಹರ್, ನವದೆಹಲಿಯ ಜಾಫರ್ ಖಾನ್, ಸುಖಜಿತ್ ಸಿಂಗ್, ರಾಜ್ಯ ರೈತ ಸಂಘದ ಗೋವಿಂದ ರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.