ADVERTISEMENT

ಸಂವಿಧಾನಕ್ಕೂ ಅಸ್ಪೃಶ್ಯತೆಯ ಕಳಂಕ: ಮಾವಳ್ಳಿ ಶಂಕರ್‌

ಕುವೆಂಪು ಜನ್ಮ ದಿನ, ಸಂವಿಧಾನ ಸಮರ್ಪಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 16:25 IST
Last Updated 29 ಡಿಸೆಂಬರ್ 2023, 16:25 IST
<div class="paragraphs"><p> ‘ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ’ ಜಾಗೃತಿ ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಅಂಬೇಡ್ಕರ್‌ ಪ್ರತಿಮೆಗೆ, ಕುವೆಂಪು, ಬಿ.ಕೃಷ್ಣಪ್ಪ, ಬಿ. ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.</p></div>

‘ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ’ ಜಾಗೃತಿ ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಅಂಬೇಡ್ಕರ್‌ ಪ್ರತಿಮೆಗೆ, ಕುವೆಂಪು, ಬಿ.ಕೃಷ್ಣಪ್ಪ, ಬಿ. ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಸ್ವಾತಂತ್ರ್ಯ ಬಂದ ಮೇಲೆ 75 ವರ್ಷಗಳಲ್ಲಿ ಸಾಕ್ಷರತೆ ಹೆಚ್ಚಿದೆ. ಆದರೆ, ಸಂವಿಧಾನದ ಬಗ್ಗೆ ಅನಕ್ಷರತೆ ಅಧಿಕವಾಗಿದೆ. ಸಂವಿಧಾನವು ಅಸ್ಪೃಶ್ಯತೆಯ ಕಳಂಕಕ್ಕೆ ಒಳಗಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

ಮಹಾಕವಿ ಕುವೆಂಪು ಜನ್ಮದಿನ ಮತ್ತು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶುಕ್ರವಾರ ಹಮ್ಮಿಕೊಂಡಿದ್ದ ‘ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಎಲ್ಲ ಜನಾಂಗದವರು ಸಂವಿಧಾನವನ್ನು ಸ್ವೀಕರಿಸಿ, ಅದರಲ್ಲಿರುವ ಜೀವಪರ ನಿಲುವುಗಳನ್ನು ಅನುಸರಿಸಿದಾಗ ಸಂವಿಧಾನ ಉಳಿಯಲು ಸಾಧ್ಯ. ಸಂವೇದನೆ ರಹಿತ ಸಮಾಜದಲ್ಲಿ ಯಾವ ಕಾನೂನು ಕೂಡ ಕೆಲಸ ಮಾಡದು. ಸಂವೇದನಶೀಲ ಸಮಾಜವನ್ನಾಗಿ ಪರಿವರ್ತಿಸುವ ಜವಾಬ್ದಾರಿ ಬೌದ್ಧಿಕ ಪ್ರಗತಿಪರರ ಮೇಲಿದೆ ಎಂದು ತಿಳಿಸಿದರು.

ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ, ‘ಹಿಂದುಳಿದವರ ಸಮಸ್ಯೆ ಒಂದೇ ಆಗಿದ್ದರೂ, ಒಂದು ಜಾತಿಗೂ ಇನ್ನೊಂದು ಜಾತಿಗೂ ಆಗಲ್ಲ. ನಮ್ಮ ಕಿತ್ತಾಟದಲ್ಲಿ ಪ್ರಬಲ ಸಮುದಾಯಗಳೆರಡು ನಿರಂತರ ಅಧಿಕಾರವನ್ನು ಅನುಭವಿಸುತ್ತಾ ಬಂದಿವೆ. ಮನೆ ಮನೆಗೆ ಭೇಟಿ ನೀಡಿ ಕೈಗೊಂಡ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯನ್ನು ಜನರ ಎದುರು ಇಡದೇ, ಅದರಲ್ಲೇನಿದೆ ಎಂದು ತಿಳಿಯದೇ ಅವೈಜ್ಞಾನಿಕ ಎಂದು ಕರೆಯುವವರಿಗೆ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸಮೀಕ್ಷೆ ವರದಿ ಬಿಡುಗಡೆಯನ್ನು ವಿರೋಧಿಸುವವರಿಗೆ ಸಂದೇಶ ಕಳುಹಿಸಲು ಜ.28ರಂದು ಚಿತ್ರದುರ್ಗದಲ್ಲಿ ಹಿಂದುಳಿದವರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ದಲಿತರಿಗೆ ಉಪದೇಶ ನೀಡುವುದನ್ನು ಬಿಟ್ಟು, ಶೋಷಕರ ಮನಪರಿವರ್ತನೆ ಮಾಡಬೇಕು.. ಕುವೆಂಪು ವಿವೇಕ, ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು’ ಎಂದು ಚಿಂತಕ ರವಿಕುಮಾರ್‌ ಬಾಗಿ ಸಲಹೆ ನೀಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌, ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ, ಚಿಂತಕರಾದ ಶ್ರೀಪಾದ ಭಟ್‌, ರಮೇಶ್‌ ಡಾಕುಳಗಿ, ನಿರ್ಮಲಾ, ಮಣಿಪಾಲ ರಾಜಪ್ಪ, ನಾಗಣ್ಣ ಬಡಿಗೇರ ಮಾತನಾಡಿದರು.

‘ಮಂದಿರ ಸಾಕು ಮನೆ–ಮನ ಕಟ್ಟಿ’

ಮಂದಿರ ಕಟ್ಟಿದ್ದೀರಿ. ಸಾಕು ಮಾಡಿ. ಮುಂದೆ ಮನೆ–ಮನಗಳನ್ನು ಕಟ್ಟಿ. ಲಕ್ಷಾಂತರ ಮಂದಿ ಇಂದಿಗೂ ಇರಲೊಂದು ಮನೆ ಇಲ್ಲದೇ ಬದುಕುತ್ತಿದ್ದಾರೆ. ಅವರಿಗೆ ಬದುಕು ಕಟ್ಟಿಕೊಡಿ ಎಂದು ಮಾಜಿ ಸಚಿವ ಎಚ್‌. ಆಂಜನೇಯ ತಿಳಿಸಿದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ನಮ್ಮ ತೆರಿಗೆ ಹಣದಲ್ಲಿ ಮಂದಿರ ಕಟ್ಟಬೇಡಿ. ಚರಂಡಿ ರಸ್ತೆ ಬದಿಯಲ್ಲಿ ಶೌಚಾಲಯದ ಬದಿಯಲ್ಲಿ ಬದುಕುತ್ತಿರುವವರಿಗೆ ಸೂರು ನೀಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.