ADVERTISEMENT

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅಗಾಧ: ಎಲ್.ಎನ್. ಮುಕುಂದರಾಜ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:04 IST
Last Updated 10 ನವೆಂಬರ್ 2024, 16:04 IST
ನಗರದ ಅರಮನೆ ಮೈದಾನದಿಂದ ವಿಧಾನಸೌಧದವರೆಗೆ ನಡೆದ ಭುವನೇಶ್ವರಿ ದೇವಿಯ ರಥೋತ್ಸವದಲ್ಲಿ ಮಹಿಳೆಯರು ಕಳಶ ಹೊತ್ತು ಸಾಗಿದರು
ಪ್ರಜಾವಾಣಿ ಚಿತ್ರ
ನಗರದ ಅರಮನೆ ಮೈದಾನದಿಂದ ವಿಧಾನಸೌಧದವರೆಗೆ ನಡೆದ ಭುವನೇಶ್ವರಿ ದೇವಿಯ ರಥೋತ್ಸವದಲ್ಲಿ ಮಹಿಳೆಯರು ಕಳಶ ಹೊತ್ತು ಸಾಗಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರು ಅಗಾಧವಾದ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೊಡುಗೆಯನ್ನು ಕನ್ನಡಿಗರು ಮರೆಯಲು ಅಸಾಧ್ಯ’ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ಕನ್ನಡ ಡಿಂಡಿಮ ಸಮಿತಿ ಭಾನುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ‘ಕನ್ನಡ ಡಿಂಡಿಮ ಉತ್ಸವ’ದಲ್ಲಿ ಭುವನೇಶ್ವರಿ ದೇವಿಯ ರಥಕ್ಕೆ ಕನ್ನಡಾರತಿ ಹಚ್ಚುವ ಮೂಲಕ ಚಾಲನೆ ನೀಡಿದರು.

‘ಕುವೆಂಪು ಅವರು ಮಕ್ಕಳ ಸಾಹಿತ್ಯದಿಂದ ಹಿಡಿದು ‘ಶ್ರೀರಾಮಾಯಣ ದರ್ಶನಂ’ವರೆಗೂ ವಿಭಿನ್ನ ರೀತಿಯ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.

ADVERTISEMENT

‘ನಾಡಿನ ಜನತೆ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಇದನ್ನು ಹಾಗೆಯೇ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸರ್ಕಾರ ಮತ್ತು ಸಾಹಿತಿಗಳ ಮೇಲಿದೆ’ ಎಂದು ಹೇಳಿದರು.

ನಗರದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಚೊಚ್ಚಲ ‘ಡಿಂಡಿಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಅವರು ಪ್ರಶಸ್ತಿ ಸ್ವೀಕರಿಸಿದರು.

ನಗರದ ಅರಮನೆ ಮೈದಾನದಿಂದ ವಿಧಾನಸೌಧದವರೆಗೆ ನಡೆದ ಭುವನೇಶ್ವರಿ ದೇವಿಯ ರಥೋತ್ಸವದಲ್ಲಿ ನೂರಾರು ಜನ ಕನ್ನಡಪರ ಹೋರಾಟಗಾರರು ಪಾಲ್ಗೊಂಡಿದ್ದರು. 

ಸಂತೋಷ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.