ADVERTISEMENT

ಮಂಗನ ಕಾಯಿಲೆ: ಕಣ್ಗಾವಲಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:05 IST
Last Updated 31 ಜನವರಿ 2024, 16:05 IST
<div class="paragraphs"><p>ಮಂಗನ ಕಾಯಿಲೆ</p></div>

ಮಂಗನ ಕಾಯಿಲೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಕೆಎಫ್‌ಡಿ) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ಶಂಕಿತ ಪ್ರಕರಣಗಳನ್ನು ಗುರುತಿಸುವ ಜತೆಗೆ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಬೇಕು ಎಂದು ಕೆಎಫ್‌ಡಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. 

ADVERTISEMENT

ಶಿವಮೊಗ್ಗ, ಉತ್ತರ ಕನ್ನಡ ಸೇರಿ ಕೆಲವೆಡೆ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿರುವುದರಿಂದ ರೋಗದ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. 

‘ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಲಕ್ಷಣವನ್ನು ಆಧರಿಸಿ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ವೈರಾಣುವನ್ನು ಮನುಷ್ಯನಿಗೆ ದಾಟಿಸುತ್ತವೆ. ಈ ವೈರಾಣು ಕಾಣಿಸಿಕೊಂಡವರಿಗೆ ಹಠಾತ್ ಜ್ವರ ಹಾಗೂ ತೀವ್ರ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಕೆಎಫ್‌ಡಿ ಬಾಧಿತ ಜಿಲ್ಲೆಗಳಲ್ಲಿ ಎಲ್ಲ ಜ್ವರ ಪ್ರಕರಣಗಳೂ ಶಂಕಿತ ಕೆಎಫ್‌ಡಿ ಪ್ರಕರಣಗಳೇ ಆಗಿರುತ್ತವೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ, ಚಿಕಿತ್ಸೆ ನೀಡಿದಲ್ಲಿ ರೋಗದ ನಿರ್ವಹಣೆ ಸುಲಭಸಾಧ್ಯ’ ಎಂದು ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ. 

‘ಮಂಗಗಳ ಅಸಹಜ ಸಾವು ವರದಿಯಾದಲ್ಲಿ ಸೋಂಕು ಶಂಕಿತರ ಮೇಲೆ ಕಣ್ಗಾವಲು ಪ್ರಕ್ರಿಯೆ ಪ್ರಾರಂಭಿಸಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಮಂಗಗಳಿಗೆ ಅಥವಾ ಮನುಷ್ಯರಿಗೆ ಸೋಂಕು ದೃಢಪಟ್ಟಲ್ಲಿ 5 ಕಿ.ಮೀ. ಸುತ್ತಮುತ್ತಲಿನ ಪ‍್ರದೇಶದ ಮೇಲೆ ಕಣ್ಗಾವಲು ವಹಿಸಬೇಕು. ಸೋಂಕು ಶಂಕಿತರ ಮಾದರಿ ಸಂಗ್ರಹ, ಪರೀಕ್ಷೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.

‘ಸೋಂಕಿತರು ಕಡ್ಡಾಯವಾಗಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಬೇಕು. ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ದಾಸ್ತಾನನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.