ಬೆಂಗಳೂರು: ‘ಪಠ್ಯ ಮರು ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರವು ಮೂಲಭೂತವಾದ ಹಾಗೂ ಪಕ್ಷದ ಸಿದ್ಧಾಂತವನ್ನು ಹೇರಲು ಪ್ರಯತ್ನಿಸಿದೆ’ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ದೂರಿದರು.
ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ‘ಪಠ್ಯ ಮರು ಪರಿಷ್ಕರಣೆ–ಒಂದು ಚಿಂತನೆ’ ವಿಚಾರಗೋಷ್ಠಿ ಹಾಗೂ ‘ಪಠ್ಯ ಮರು ಪರಿಷ್ಕರಣೆ: ಹಿನ್ನೆಲೆ–ಮುನ್ನೆಲೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ‘ಕೇಶವ ಕೃಪಾದ ಆದೇಶದಂತೆ ಪಠ್ಯದ ಮರು ಪರಿಷ್ಕರಣೆ ನಡೆದಿದೆ. ಅಲ್ಲಿನ ನಾಯಕರೇ ಸೂತ್ರ ಧಾರರು. ದಿನಕ್ಕೊಂದು ವಿವಾದ ಹುಟ್ಟುಹಾಕಿ, ಜನರ ನೆಮ್ಮದಿಯನ್ನು ಬಿಜೆಪಿ ಸರ್ಕಾರ ಕೆಡಿಸುತ್ತಿದೆ’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಮಾತ ನಾಡಿ, ‘1999ರ ವರೆಗೂ ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರಗಳ ಹಸ್ತಕ್ಷೇಪ ಇರಲಿಲ್ಲ. ನಂತರದ ವರ್ಷಗಳಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚುತ್ತಿದೆ. ಪಠ್ಯ ಪರಿಷ್ಕರಣೆಗಳಲ್ಲಿ ಆಯಾ ಸರ್ಕಾರಗಳು ಸಂಪೂರ್ಣ ಅಂತರ ಕಾಯ್ದುಕೊಳ್ಳಬೇಕು. ಪಕ್ಷದ ನಿಲುವುಗಳನ್ನು ಹೇರಬಾರದು. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪಠ್ಯವು ರೂಪುಗೊಳ್ಳಬೇಕು’ ಎಂದು ಹೇಳಿದರು.
ಸಾಹಿತಿ ಕೆ. ಷರೀಫಾ ಮಾತನಾಡಿ, ‘ಪಠ್ಯದಲ್ಲಿದ್ದ ಮೌಲ್ಯಗಳನ್ನು ಹಾಳು ಮಾಡುವ ಪ್ರಯತ್ನವನ್ನು ಹಾಗೂ ರಾಜ್ಯದಲ್ಲಿ ನೆಲೆಸಿದ್ದ ಸೌಹಾರ್ದ ವಾತಾ ವರಣ ಕೆಡಿಸುವ ಷಡ್ಯಂತ್ರವನ್ನು ಸರ್ಕಾರ ಮಾಡಿದೆ. ಇವರು ಕುವೆಂಪು, ಅಂಬೇಡ್ಕರ್ ವಿರೋಧಿಗಳು’ ಎಂದರು.
ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ, ಡಿಎಸ್‌ಎಂಎಂ ಕೇಂದ್ರ ಸಮಿತಿ ಸದಸ್ಯ ಎನ್.ನಾಗರಾಜ್, ಸಮಿತಿಯ ಸಹ ಸಂಚಾಲಕ ಬಿ.ರಾಜಶೇಖರಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.