ADVERTISEMENT

ಗಿಗ್‌ ಕಾರ್ಮಿಕರ ರಕ್ಷಣೆಗೆ ಮಂಡಳಿ: ಕರಡು ಮಸೂದೆ ಪ್ರಕಟಿಸಿದ ಕಾರ್ಮಿಕ ಇಲಾಖೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:25 IST
Last Updated 30 ಜೂನ್ 2024, 16:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸಲು ಪ್ರತ್ಯೇಕ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಮುಂದಾಗಿರುವ ಕಾರ್ಮಿಕ ಇಲಾಖೆ, ಅದಕ್ಕೆ ಪೂರಕವಾಗಿ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯನ್ನು ರೂಪಿಸಿದೆ.

ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2024ರ ಕರಡನ್ನು ಕಾರ್ಮಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟಿಸಿದ್ದು, ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಸಾಧ್ಯತೆ ಇದೆ.

ADVERTISEMENT

ಮಸೂದೆಯ ಪ್ರಕಾರ, ಕಾರ್ಮಿಕರ ಸಚಿವರ ಅಧ್ಯಕ್ಷತೆಯಲ್ಲೇ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಯ ಇಬ್ಬರು ಅಧಿಕಾರಿಗಳು, ಕಾರ್ಮಿಕ ಆಯುಕ್ತರು, ಗಿಗ್‌ ಕಾರ್ಮಿಕರ ಇಬ್ಬರು ಪ್ರತಿನಿಧಿಗಳು, ಸೇವೆ ಬಳಸಿಕೊಳ್ಳುವ ಕಂಪನಿಗಳ ಇಬ್ಬರು ಪ್ರತಿನಿಧಿಗಳು, ಕಾರ್ಮಿಕ ಸಂಬಂಧಿ ವಿಷಯಗಳಲ್ಲಿ ಪರಿಣತಿ ಹೊಂದಿರುವ ಒಬ್ಬರು ಮಂಡಳಿಯ ಸದಸ್ಯರಾಗಿರುತ್ತಾರೆ.

ಗಿಗ್‌ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸಿ ಅವರಿಗೆ ಪ್ರತ್ಯೇಕ ನಿಧಿ ಸ್ಥಾಪಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಇದಕ್ಕಾಗಿ ಗಿಗ್‌ ಕಾರ್ಮಿಕರ ಕೆಲಸಕ್ಕೆ ವಿಧಿಸುವ ಶುಲ್ಕಕ್ಕೆ ಅನುಸಾರವಾಗಿ ಪ್ರತ್ಯೇಕ ಸೆಸ್‌ ಸಂಗ್ರಹಿಸುವ ಪ್ರಸ್ತಾವವೂ ಇದೆ. ನೋಂದಣಿ ಶುಲ್ಕವೂ ಸೇರಿದಂತೆ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಗಿಗ್‌ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಬಳಸಲಾಗುತ್ತದೆ.

ಗಿಗ್‌ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಕಂಪನಿಯು ಎಲ್ಲ ಕಾರ್ಮಿಕರ ಮಾಹಿತಿಯನ್ನು ಮಂಡಳಿ ಜತೆ ಹಂಚಿಕೊಳ್ಳಬೇಕು. ಸೇವಾದಾರ ಕಂಪನಿಯೂ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಮಸೂದೆಯ ಪ್ರಕಾರ, ನಿರ್ದಿಷ್ಟ ಕಾರಣಗಳಲ್ಲದೇ ಗಿಗ್‌ ಕಾರ್ಮಿಕರನ್ನು ಕೆಲಸದಿಂದ ಕೈಬಿಡುವಂತಿಲ್ಲ. ಅವರಿಗೆ ಪಾವತಿಸಬೇಕಾದ ಮೊತ್ತದಲ್ಲಿ ಕಡಿತ ಮಾಡುವಂತಿಲ್ಲ.

ಈ ಕಾರ್ಮಿಕರ ಕುಂದು ಕೊರತೆಗಳನ್ನು ಪರಿಹರಿಸುವ ಅಧಿಕಾರವೂ ಮಂಡಳಿಗೆ ಇರುತ್ತದೆ. ಕಾಯ್ದೆಯನ್ನು ಉಲ್ಲಂಘಿಸುವವರಿಗೆ ₹ 1 ಲಕ್ಷದವರೆಗೆ ದಂಡ ವಿಧಿಸುವುದಕ್ಕೂ ಅವಕಾಶ ಇರಲಿದೆ. ಗಿಗ್‌ ಕಾರ್ಮಿಕರ ಸೇವೆ ಬಳಸಿಕೊಳ್ಳುವ ಕಂಪನಿಗಳಲ್ಲಿ ತಪಾಸಣೆ ನಡೆಸುವ ಅಧಿಕಾರವನ್ನೂ ಮಸೂದೆಯು ಕಾರ್ಮಿಕ ಇಲಾಖೆಗೆ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.