ADVERTISEMENT

ಬೆಂಗಳೂರು | ಕೆಂಪೇಗೌಡ ಬಡಾವಣೆ: ನೀಗದ ಬವಣೆ

ರಸ್ತೆ, ನೀರು, ಚರಂಡಿ, ವಿದ್ಯುತ್‌ ಇಲ್ಲದೇ ಸಂಕಷ್ಟಕ್ಕೆ ಈಡಾದ ನಿವೇಶನದಾರರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 1:08 IST
Last Updated 9 ನವೆಂಬರ್ 2024, 1:08 IST
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿರು ಒಟ್ಟು ಒಂಬತ್ತು ಬ್ಲಾಕ್‌ಗಳ ಪೈಕಿ 7ನೇ ಬ್ಲಾಕ್‌ಗಳಲ್ಲಿ ಮಾತ್ರ ರಸ್ತೆ ಡಾಂಬರೀಕರಣ ಮಾಡಲಾಗಿದೆ
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿರು ಒಟ್ಟು ಒಂಬತ್ತು ಬ್ಲಾಕ್‌ಗಳ ಪೈಕಿ 7ನೇ ಬ್ಲಾಕ್‌ಗಳಲ್ಲಿ ಮಾತ್ರ ರಸ್ತೆ ಡಾಂಬರೀಕರಣ ಮಾಡಲಾಗಿದೆ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ ಬ್ಲಾಕ್‌ಗಳಿಗೆ ನವೆಂಬರ್‌ ಒಳಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಬಿಡಿಎ ನೀಡಿದ್ದ ಭರವಸೆ ಹುಸಿಯಾಗಿದೆ. ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ವಿಧಿಸಿದ್ದ ಅಂತಿಮ ಗಡುವು ಮುಗಿದರೂ ಬಡಾವಣೆಯ ನಿವೇಶನದಾರರ ಬವಣೆ ನೀಗಿಲ್ಲ.

ಮೈಸೂರು ರಸ್ತೆಯಲ್ಲಿ ಚಲ್ಲಘಟ್ಟ ಸಮೀಪ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಈ ಬಡಾವಣೆಯ ನಿವೇಶನಗಳನ್ನು 2016 ಮತ್ತು 2018ರಲ್ಲಿ ಹಂಚಿಕೆ ಮಾಡಲಾಗಿತ್ತು. ಬಡಾವಣೆಯಲ್ಲಿ 9 ಬ್ಲಾಕ್‌ಗಳಿದ್ದು, ಸುಮಾರು 29 ಸಾವಿರ ನಿವೇಶನಗಳಿವೆ. ಆದರೆ, ವಿದ್ಯುತ್‌, ನೀರು, ರಸ್ತೆ ಸಂಪರ್ಕ ಇಲ್ಲದ ಕಾರಣ 30 ಕುಟುಂಬಗಳಷ್ಟೇ ಮನೆ ನಿರ್ಮಿಸಿಕೊಂಡಿವೆ.

ಬಿಡಿಎ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಇಲ್ಲಿನ ನಿವೇಶನದಾರರು ರಚಿಸಿಕೊಂಡಿರುವ ‘ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ’ಯು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಗೆ ದೂರು ನೀಡಿತ್ತು. ಒಂದು ವರ್ಷದ ಒಳಗೆ ಅಭಿವೃದ್ಧಿ ಕಲ್ಪಿಸುವಂತೆ 2022ರಲ್ಲಿ ಅರ್ಜಿ ಸಮಿತಿಯು ಬಿಡಿಎಗೆ ಸೂಚಿಸಿತ್ತು. ಈ ಅವಧಿ 2023ರ ಸೆಪ್ಟೆಂಬರ್‌ಗೆ ಕೊನೆಗೊಂಡರೂ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಅಭಿವೃದ್ಧಿಪಡಿಸಲು ಇನ್ನೂ 12 ತಿಂಗಳು ಬೇಕು ಎಂದು ಆಗ ಬಿಡಿಎ ಕೋರಿಕೆ ಸಲ್ಲಿಸಿತ್ತು. ‘12ರ ಬದಲು 14 ತಿಂಗಳು ತೆಗೆದುಕೊಳ್ಳಿ. ಇದೇ ಅಂತಿಮ ಗಡುವು. ಅದರೊಳಗೆ ಮೂಲಸೌಕರ್ಯ ಕಲ್ಪಿಸಿ’ ಎಂದು ಅರ್ಜಿ ಸಮಿತಿ ನಿರ್ದೇಶನ ನೀಡಿತ್ತು. ಈ 14 ತಿಂಗಳ ಅವಧಿಯೂ ಮುಗಿದಿದೆ ಎಂದು ಮುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್‌ ತಿಳಿಸಿದರು.

ADVERTISEMENT

ಒಂದೇ ಬ್ಲಾಕ್‌ ಅಭಿವೃದ್ಧಿ: ‘ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಅವರು ಇತ್ತೀಚೆಗೆ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಬೇಗ ಸೌಕರ್ಯ ಕಲ್ಪಿಸುವಂತೆ ತಿಳಿಸಿದ್ದರು. ಜೊತೆಗೆ ಅರ್ಜಿ ಸಮಿತಿಯ ಗಡುವು ಕೂಡ ಇತ್ತು.  ಮೈಸೂರು ರಸ್ತೆ ಕಡೆಯಿಂದ ಕಾಣುವ 7ನೇ ಬ್ಲಾಕ್‌ ಅನ್ನು ಮಾತ್ರ ಬಿಡಿಎ ಅಭಿವೃದ್ಧಿ ಮಾಡಿ, ಎಲ್ಲ ಕಡೆ ಅಭಿವೃದ್ಧಿಯಾಗಿದೆ ಎಂದು ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಲಾಗಿದೆ. 7ನೇ ಬ್ಲಾಕ್‌ನಲ್ಲಿ ಮಾತ್ರ ಶೇ 80ರಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. 5 ಮತ್ತು 6ನೇ ಬ್ಲಾಕ್‌ಗಳಲ್ಲಿ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಉಳಿದ ಬ್ಲಾಕ್‌ಗಳಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ’ ಎಂದು ಸೂರ್ಯಕಿರಣ್‌ ದೂರಿದರು.

‘ಕೆಲಸ ಪ್ರಗತಿಯಲ್ಲಿದೆ’: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಎನ್. ಜಯರಾಂ, ‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲಸವೇ ನಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಶೀಘ್ರದಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ’ ಎಂದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಒಂದು ಬ್ಲಾಕ್‌ನಲ್ಲಿರುವ ಕಚ್ಚಾ ರಸ್ತೆ
‘ಭರವಸೆಯಷ್ಟೇ.. ಕೆಲಸ ಇಲ್ಲ’
4040 ಎಕರೆಯಲ್ಲಿ ಬಡಾವಣೆ ನಿರ್ಮಿಸಲು 2010ರಲ್ಲಿ ಬಿಡಿಎ ಯೋಜನೆ ರೂಪಿಸಿತ್ತು. ಅದರಲ್ಲಿ 2200 ಎಕರೆಯಲ್ಲಿ ಬಡಾವಣೆಯನ್ನು ನಿರ್ಮಿಸಿದೆ. ಎಲ್ಲ 9 ಬ್ಲಾಕ್‌ಗಳ ನಿವೇಶನದಾರರಿಂದ ಹಂತ ಹಂತವಾಗಿ ಹಣ ಪಡೆಯದೇ ಒಂದೇ ಬಾರಿಗೆ ನಿವೇಶನ ಮೊತ್ತವನ್ನು ಬಿಡಿಎ ಕಟ್ಟಿಸಿಕೊಂಡು 2016 ಮತ್ತು 2018ರಲ್ಲಿ ನಿವೇಶನ ಹಂಚಿಕೆ ಮಾಡಿದೆ. ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು 2016ರಿಂದಲೂ ಹೇಳಿಕೊಂಡು ಬಂದಿರುವ ಬಿಡಿಎ ಇನ್ನೂ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಈಗ 7ನೇ ಬ್ಲಾಕ್‌ನಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಉಳಿದ ಬ್ಲಾಕ್‌ನ ನಿವೇಶನದಾರರು ಮನೆ ಕಟ್ಟುವುದು ಬೇಡವೇ? ಚನ್ನಬಸವರಾಜ ಅಧ್ಯಕ್ಷ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ
‘ಯಾವ ಗಡುವೂ ಪಾಲನೆಯಾಗಿಲ್ಲ’
7ನೇ ಬ್ಲಾಕ್‌ ಹೊರತುಪಡಿಸಿ ಉಳಿದವುಗಳಲ್ಲಿ ವಾಹನ ಸಂಚಾರವೇ ಕಷ್ಟವಾಗುವ ಕಚ್ಚಾ ರಸ್ತೆಗಳಷ್ಟೇ ಇವೆ. ವಿದ್ಯುತ್ ಬೀದಿದೀಪದ ಡಮ್ಮಿ ಕಂಬಗಳು ಕಾರ್ಯನಿರ್ವಹಿಸದ ಉಪ ಕೇಂದ್ರಗಳಿವೆ. ವಿದ್ಯುತ್‌ ವಿತರಣಾ ಜಾಲ ಇನ್ಣೂ ಎಲ್ಲ ಕಡೆ ತಲುಪಿಲ್ಲ. ಒಳಚರಂಡಿ ಜಾಲ ಪೂರ್ಣಗೊಳಿಸದ ಕಾರಣ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿವೆ. ಕುಡಿಯುವ ನೀರಿನ ಸೌಕರ್ಯವಿಲ್ಲ. ಈ ಬಗ್ಗೆ ‘ರೇರಾ’ಕ್ಕೆ ಹಿಂದೆಯೇ ವೇದಿಕೆ ದೂರು ನೀಡಲಾಗಿತ್ತು. 2018 2020 ಮತ್ತು 2021ರಲ್ಲಿ ‘ರೇರಾ’ ಗಡುವು ನೀಡಿದ್ದರೂ ಬಿಡಿಎ ಪಾಲಿಸಿಲ್ಲ. ಆನಂತರ ಅರ್ಜಿ ಸಮಿತಿ ನೀಡಿದ ಎರಡು ಗಡುವುಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಎಂ. ಅಶೋಕ್ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ
ಮನೆ ಕಟ್ಟುವುದು ಹೇಗೆ?
ಸರಿಯಾದ ರಸ್ತೆ ಇಲ್ಲ ನೀರು ವಿದ್ಯುತ್‌ ಇಲ್ಲ. ನಿವೇಶನದಾರರು ಮನೆ ಕಟ್ಟಿಕೊಳ್ಳುವುದು ಹೇಗೆ? ಹಾಗಾಗಿ ಇಲ್ಲಿವರೆಗೆ 25–30 ಮನೆಗಳಷ್ಟೇ ನಿರ್ಮಾಣಗೊಂಡಿವೆ. ಈ ಯೋಜನೆಯಡಿ 1300 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು ಆ ಸಮಸ್ಯೆಯೂ ಇತ್ಯರ್ಥವಾಗಿಲ್ಲ. ಈಗಾಗಲೇ ಭೂಸ್ವಾಧೀನ ಮಾಡಿಕೊಂಡು ನಿವೇಶನ ಹಂಚಿರುವಲ್ಲಿಯೂ ಸಮಸ್ಯೆಗಳು ಪರಿಹಾರವಾಗಿಲ್ಲ. ಗುತ್ತಿಗೆದಾರರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವುದೇ ಕಾಮಗಾರಿ ಕುಂಠಿತವಾಗಲು ಕಾರಣ. ಸೂರ್ಯಕಿರಣ್‌ ಜಂಟಿ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.