ಬೆಂಗಳೂರು: ವರ್ಷದಿಂದ ವರ್ಷಕ್ಕೆ ನಗರದಲ್ಲಿ ಹಸಿರುಮಯ ವಾತಾವರಣ ಕುಗ್ಗುತ್ತಿದೆ. ಇದರ ನಡುವೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೊಸ ಬಡಾವಣೆಗಳಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡದೇ ಕಾಮಗಾರಿ ನಡೆಸುತ್ತಿರುವುದು ನಿವೇಶನ ಖರೀದಿದಾರರು, ಸ್ಥಳೀಯ ನಿವಾಸಿಗಳ ಆತಂಕ ಹೆಚ್ಚಿಸುವಂತೆ ಮಾಡಿದೆ.
4,040 ಎಕರೆ ವಿಸ್ತೀರ್ಣದಲ್ಲಿ ಕೆಂಪೇಗೌಡ ಬಡಾವಣೆ ತಲೆಯುತ್ತಿದೆ. ಮೊದಲ ಹಂತದಲ್ಲಿ 2,685 ಎಕರೆಯಷ್ಟು ಜಮೀನು ಸ್ವಾಧೀನ ಪಡಿಸಿಕೊಂಡು ಕೆಂಪೇಗೌಡ ಬಡಾವಣೆ ನಿರ್ಮಿಸಲಾಗುತ್ತಿದೆ. ಇದು ಕೃಷಿ ಜಮೀನಾಗಿದ್ದರಿಂದ ಈ ಪ್ರದೇಶದಲ್ಲಿ ಅಡಿಕೆ, ತೆಂಗು, ಮಾವು ಸೇರಿದಂತೆ ವಿವಿಧ ಬಗೆಯ ಮರಗಳು ನಳನಳಿಸುತ್ತಿದ್ದವು. ಜಮೀನು ಸಮತಟ್ಟು, ಚರಂಡಿ ನಿರ್ಮಾಣ, ನಿವೇಶನ ಮಾರ್ಪಾಡು, ರಸ್ತೆ, ಮೋರಿ ನಿರ್ಮಾಣಕ್ಕೆ 2018ರಲ್ಲಿಯೇ ಅಂದಾಜು 2 ಲಕ್ಷದಷ್ಟು ಮರಗಳನ್ನು ಕಡಿಯಲಾಗಿತ್ತು. ಅದನ್ನು ಸರಿದೂಗಿಸಲು ‘ಹಸಿರೀಕರಣ ಯೋಜನೆ’ ರೂಪಿಸಬೇಕಿತ್ತು. ಆದರೆ, ಬಡಾವಣೆಯಲ್ಲಿ ಹಸಿರು ಬೆಳೆಸುವ ಕಾಳಜಿಯನ್ನು ಬಿಡಿಎ ತೋರುತ್ತಿಲ್ಲ.
ಸ್ಥಳೀಯ ನಿವಾಸಿಗಳ ಹೋರಾಟದಿಂದ ರಾಜಕಾಲುವೆಯ ಬಫರ್ ವಲಯದಲ್ಲಿ ಅಂದಾಜು 25 ಸಾವಿರದಷ್ಟು ಸಸಿಗಳನ್ನು ನೆಡಲಾಗಿದೆ. ಅವುಗಳ ನಿರ್ವಹಣೆಯೂ ಈಗ ನಡೆಯುತ್ತಿಲ್ಲ. ಅದನ್ನು ಹೊರತುಪಡಿಸಿ ಉಳಿದೆಡೆ ‘ಹಸಿರು ಮಾಯ’ವಾಗಿದೆ. ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಕಡಿಮೆ ಮರಗಳನ್ನು ಹೊಂದಿರುವ ಅಪಖ್ಯಾತಿಗೂ ಈ ಬಡಾವಣೆ ಒಳಗಾಗುವ ಸಾಧ್ಯತೆಯಿದೆ.
ಚರಂಡಿ, ರಸ್ತೆ ಪಕ್ಕದಲ್ಲಿ ಸಸಿಗಳನ್ನು ನೆಡಲು ಅವಕಾಶ ಇಲ್ಲದಂತೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ನಿವೇಶನದಾರರು ಆಕ್ರೋಶ ಹೊರಹಾಕಿದ್ದಾರೆ.
ಶಿವರಾಮ ಕಾರಂತ್ ಬಡಾವಣೆ, ವಿಶ್ವೇಶ್ವರಯ್ಯ ಸೇರಿದಂತೆ ಹೊಸ ಬಡಾವಣೆಗಳಲ್ಲಿ ನಿವೇಶನದಾರರಿಗೆ ಸಸಿಗಳನ್ನು ನೆಡಲು ಸ್ಥಳಾವಕಾಶ ನೀಡಲಾಗಿದೆ. ಆದರೆ, ಕೆಂಪೇಗೌಡ ಬಡಾವಣೆಯಲ್ಲಿ ಸ್ಥಳವನ್ನೇ ಬಿಡದೆ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಬಡಾವಣೆ ನಿವಾಸಿಗಳಿಗೆ ಭವಿಷ್ಯದಲ್ಲಿ ತೊಂದರೆ ಎದುರಾಗಲಿದೆ ಎಂದು ಕೆಂಪೇಗೌಡ ಬಡಾವಣೆಯ ಓಪನ್ ಫೋರಂ ವಕ್ತಾರ ಸೂರ್ಯಕಿರಣ್ ‘ಪ್ರಜಾವಾಣಿ’ ಆತಂಕ ವ್ಯಕ್ತಪಡಿಸುತ್ತಾರೆ.
ಉದ್ಯಾನವೂ ಮಾಯ: ಮೂಲಸೌಕರ್ಯದಿಂದ ತತ್ತರಿಸುವ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನದಾರರು ಮನೆ ನಿರ್ಮಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದುವರೆಗೂ ಅಂದಾಜು 150 ಮನೆಗಳನ್ನಷ್ಟೇ ಕಟ್ಟಲಾಗಿದೆ. 30, 40 ಹಾಗೂ 50 ಅಡಿ ಅಗಲದ ರಸ್ತೆಯಲ್ಲಿ ಯುಟಿಲಿಟಿ ಚಾನಲ್, ಬೀದಿ ದೀಪಗಳ ಅಳವಡಿಕೆ, ವಿದ್ಯುತ್ ಪರಿವರ್ತಕ ಹಾಗೂ ಚೇಂಬರ್ ಬಾಕ್ಸ್‌ಗಳಿರುವುದರಿಂದ ಸಸಿ ನೆಡಲು ಅವಕಾಶ ಇಲ್ಲವಾಗಿದೆ. 60 ಅಡಿ ರಸ್ತೆಯ ಎರಡೂ ಬದಿಯ ಯುಟಿಲಿಟಿ ಚಾನಲ್‌ಗಳಿವೆ. ಅಲ್ಲಿಯೂ ಹಸಿರೀಕರಣಕ್ಕೆ ಅವಕಾಶ ಸಿಗುವುದಿಲ್ಲ. 20X30, 30X40 ಅಡಿ ವಿಸ್ತೀರ್ಣದ ನಿವೇಶನದಾರರಿಗೆ ಒಂದು ಸಸಿ ನೆಡುವುದಕ್ಕೆ ಸ್ಥಳದ ಅಭಾವವಿದೆ ಎಂದು ನಿವೇಶನದಾರರು ಹೇಳುತ್ತಾರೆ.
ಬಡಾವಣೆಯಲ್ಲಿ 9 ಬ್ಲಾಕ್‌ಗಳಿವೆ. ಅಲ್ಲಿಯೂ ವಿಶಾಲವಾದ ಉದ್ಯಾನ ನಿರ್ಮಿಸಿಲ್ಲ. ಭವಿಷ್ಯದಲ್ಲಿ ಮರಗಳನ್ನು ಬೆಳೆಸಲು ಆಗದಂತೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ ಎಂದು ನಿವಾಸಿಗಳು ಹೇಳಿದರು.
ಬೇಸಿಗೆ ಅವಧಿಯಲ್ಲಿ ಬೇರೆ ಬಡಾವಣೆಗಳಿಗಿಂತ ಕೆಂಪೇಗೌಡ ಬಡಾವಣೆಯಲ್ಲಿ 2ರಿಂದ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಸೂರ್ಯಕಿರಣ್ ವಕ್ತಾರ ಕೆಂಪೇಗೌಡ ಬಡಾವಣೆ ಓಪನ್ ಫೋರಂ
ಪರಿಸರ ಇಲಾಖೆ ನಿಯಮ ಉಲ್ಲಂಘನೆ
ಒಟ್ಟು 607 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದರು. ಇಲಾಖೆ ಸೂಚನೆಯಂತೆ ಉದ್ಯಾನ ಹಾಗೂ ನಾಗರಿಕರ ಸೌಕರ್ಯಕ್ಕೆ ಸ್ಥಳ (387 ಎಕರೆ)ವನ್ನು ಮೀಸಲಿಡಬೇಕಿತ್ತು. 2685 ಎಕರೆ ಪ್ರದೇಶದ 10 ಬ್ಲಾಕ್‌ಗಳಲ್ಲಿ ಎಲ್ಲಿಯೂ ವಿಶಾಲವಾದ ಸ್ಥಳವನ್ನೇ ಬಿಟ್ಟಿಲ್ಲ. ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನೂ ವಸತಿ ನಿವೇಶನಕ್ಕೆ ಬಳಸಿಕೊಳ್ಳಲಾಗಿದೆ. ಎಲ್ಲ ಖಾಸಗಿ ಲೇಔಟ್‌ನಲ್ಲೂ ಹಸಿರೀಕರಣಕ್ಕೆ ಆದ್ಯತೆ ನೀಡಿ ಯೋಜನೆ ರೂಪಿಸುತ್ತಾರೆ. ಆದರೆ ಕೆಂಪೇಗೌಡ ಬಡಾವಣೆಯಲ್ಲಿ ಪರಿಸರ ಇಲಾಖೆ ವಿಧಿಸಿದ್ದ ನಿಯಮಗಳನ್ನು ಬಿಡಿಎ ಅಧಿಕಾರಿಗಳು ಹಾಗೂ ನಿವೇಶನ ಅಭಿವೃದ್ಧಿ ಪಡಿಸುತ್ತಿರುವ ಗುತ್ತಿಗೆದಾರರು ಗಾಳಿಗೆ ತೂರಿದ್ದಾರೆ. ನಕ್ಷೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗಕ್ಕೂ ಉದ್ಯಾನಕ್ಕೆ ನಿಗದಿ ಪಡಿಸಿರುವ ಸ್ಥಳಕ್ಕೆ ಸಾಕಷ್ಟು ವ್ಯತ್ಯಾಸ ಇದೆ ಎಂದು ನಿವೇಶನ ಖರೀದಿದಾರರು ಹೇಳುತ್ತಾರೆ.
ಬೇರೆ ಬಡಾವಣೆಗಳಿಗಿಂತ ಕೆಂಪೇಗೌಡ ಬಡಾವಣೆಯಲ್ಲಿ 2ರಿಂದ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ.-ಸೂರ್ಯಕಿರಣ್, ವಕ್ತಾರ, ಕೆಂಪೇಗೌಡ ಬಡಾವಣೆ ಓಪನ್ ಫೋರಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.