ADVERTISEMENT

ಪೂರೈಕೆ ಕೊರತೆ: ಎಳನೀರು, ತೆಂಗಿನಕಾಯಿ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:56 IST
Last Updated 8 ಅಕ್ಟೋಬರ್ 2024, 15:56 IST
   

ಬೆಂಗಳೂರು: ನಗರದಲ್ಲಿ ತೆಂಗಿನಕಾಯಿ ಮತ್ತು ಎಳನೀರು ಪೂರೈಕೆಯಲ್ಲಿನ ಕೊರತೆಯಿಂದಾಗಿ ದರ ಹೆಚ್ಚಳವಾಗಿದೆ. ಒಂದು ತೆಂಗಿನ ಕಾಯಿ ₹50ರಂತೆ ಮಾರಾಟವಾಗುತ್ತಿದ್ದರೆ, ಎಳನೀರು ಒಂದರ ದರ ₹60ಕ್ಕೆ ತಲುಪಿದೆ.

‘ಪ್ರತಿವರ್ಷ ಮಳೆಗಾಲದಲ್ಲಿ ಒಂದು ಎಳನೀರಿಗೆ ₹30 ರಿಂದ‌ ₹40ರಂತೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ. ತೆಂಗಿನಕಾಯಿ ₹20ರಿಂದ 25ರಂತೆ ಮಾರಾಟವಾಗುತ್ತಿತ್ತು. ಆದರೆ, ಈಗ ₹45 ರಿಂದ ₹50ರಂತೆ ಮಾರಾಟ ಆಗುತ್ತಿದೆ. ದೀಪಾವಳಿವರೆಗೂ ತೆಂಗಿನಕಾಯಿ ಬೆಲೆ ಏರುಮುಖವಾಗಿರಲಿದೆ’ ಎಂದು ವ್ಯಾಪಾರಿಗಳು ತಿಳಿಸಿದರು.

ಆರೋಗ್ಯಕರವಾದ ಎಳನೀರಿಗೆ ‘ಸಿಲಿಕಾನ್‌ ಸಿಟಿ’ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆ ಇದ್ದು, ಎಲ್ಲ ಋತುವಿನಲ್ಲೂ ದರ ಏರಿಕೆಯಾಗುತ್ತದೆ. ಹಿಂದಿನ ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿತ್ತು. ಇದರಿಂದ ತೆಂಗಿನ ಇಳುವರಿ ಕುಂಠಿತಗೊಂಡಿದೆ. ಬೆಂಗಳೂರು ನಗರಕ್ಕೆ ಎಳನೀರು ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಕಾರಣ ದರ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ADVERTISEMENT

‘ಬೆಂಗಳೂರು ನಗರಕ್ಕೆ ಸಾಮಾನ್ಯವಾಗಿ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ತುಮಕೂರು ಭಾಗದಿಂದ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಸತತ ಎರಡು ವರ್ಷಗಳ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಹಲವು ಜಮೀನುಗಳಲ್ಲಿ ಕೊಳವೆ ಬಾವಿಗಳಲ್ಲಿಯೂ ನೀರು ಬಾರದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಹಾಗಾಗಿ, ಮೊದಲಿನಷ್ಟು ಎಳನೀರು ಪೂರೈಕೆಯಾಗುತ್ತಿಲ್ಲ’ ಎಂದು ಎಳನೀರು ವ್ಯಾಪಾರಿ ಶಿವ ಹೇಳಿದರು.

‘ಮದ್ದೂರು ಎಪಿಎಂಸಿಯ ಎಳನೀರು ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಇತರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ನಗರದ ಎಳನೀರು ಪೂರೈಕೆದಾರರೊಂದಿಗೆ ಒಳ್ಳೆಯ ಸಂಪರ್ಕ ಇರುವ ಮಾರಾಟಗಾರರಿಗಷ್ಟೇ ರೈತರು ಎಳನೀರು ಪೂರೈಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.