ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿದ್ದು, ನೀರಿನ ಅಭಾವದಿಂದ ಹೂವಿ ಬೆಳೆ ಒಣಗುತ್ತಿದೆ. ಇದರಿಂದಾಗಿ, ಬೆಂಗಳೂರು ಮಾರುಕಟ್ಟೆಗೆ ಬರುತ್ತಿದ್ದ ಹೂವಿನ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿದೆ.
ಕೊಳವೆ ಬಾವಿ ಹಾಗೂ ಕೆರೆ ನೀರು ನಂಬಿಕೊಂಡು ಬಹುಪಾಲು ರೈತರು ಹೂವಿನ ಬೆಳೆ ಬೆಳೆಯುತ್ತಿದ್ದಾರೆ. ಬರಗಾಲದಿಂದಾಗಿ ಕೆರೆಯಲ್ಲಿ ನೀರು ಬತ್ತಿದ್ದು, ಕೊಳವೆ ಬಾವಿಗಳಲ್ಲಿಯೂ ನೀರು ಕಡಿಮೆಯಾಗಿದೆ. ಪರಿಣಾಮವಾಗಿ ಹೂವಿನ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದೇ ವರ್ಷದ ಜನವರಿಯಲ್ಲಿ ಉತ್ತಮ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂವು ಬಂದಿತ್ತು. ಫೆಬ್ರುವರಿಯಿಂದ ಹೂವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೂವು ಸಿಗುವುದೇ ಕಷ್ಟವಾಗುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
ನಗರದಲ್ಲಿ ಪೂಜೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಹೂವಿನ ಬೇಡಿಕೆ ಹೆಚ್ಚಿದ್ದು, ಅದಕ್ಕೆ ತಕ್ಕಷ್ಟು ಹೂವು ಪೂರೈಸಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್‌ನಲ್ಲಿ ಯುಗಾದಿ ಹಬ್ಬವಿದ್ದು, ಈ ಸಂದರ್ಭದಲ್ಲೂ ಹೂವಿನ ಕೊರತೆ ಉಂಟಾಗಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟರು.
‘ನೀರಿನ ಕೊರತೆಯಿಂದಾಗಿ ನಿಗದಿಯಂತೆ ಹೂವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಗೆ ಬರುತ್ತಿದ್ದ ಹೂವಿನ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹೂವಿನ ಪೂರೈಕೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಕೆ.ಆರ್. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ದಿವಾಕರ್ ಹೇಳಿದರು.
‘ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು, ಗುಲಾಬಿ, ಸೇವಂತಿಗೆ, ಚೆಂಡು ಹೂವು, ಕಾಕಡ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಸದ್ಯ ಹೂವು ಬರುತ್ತಿಲ್ಲ. ವ್ಯಾಪಾರವೂ ಕಡಿಮೆಯಾಗಿದೆ. ಹೀಗಾಗಿ, ನಗರದಲ್ಲಿ ಹೂವು ಸಿಗುವುದು ಕಷ್ಟವಾಗಿದೆ’ ಎಂದು ಹೇಳಿದರು.
‘ಅತ್ತಿಬೆಲೆ, ಆನೇಕಲ್, ನೆಲಮಂಗಲ, ಕನಕಪುರ, ರಾಮನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಹೂವಿನ ಬೆಳೆ ಒಣಗಿರುವುದು ಗೊತ್ತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮಾತ್ರ ಹೂವಿನ ಬೆಳೆ ಚೆನ್ನಾಗಿದೆ. ಅದೇ ಹೂವು ಇದೀಗ ಕೆ.ಆರ್.ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ’ ಎಂದು ತಿಳಿಸಿದರು.
ಹೂವು ಬೆಳೆದು ನಷ್ಟ; ‘ಉತ್ತಮ ಲಾಭದ ನಿರೀಕ್ಷೆಯಿಂದ ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆಯುತ್ತಿದ್ದೆ. ಫಸಲು ಕೈಗೆ ಸೇರುವ ದಿನ ಹತ್ತಿರವಾಗುತ್ತಿತ್ತು. ಇದೇ ಸಂದರ್ಭದಲ್ಲಿ ನೀರು ಇಲ್ಲದೇ ಹೂವಿನ ಬೆಳೆ ಸಂಪೂರ್ಣ ಒಣಗಿದೆ’ ಎಂದು ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರಿನ ರೈತ ದಿಲೀಪ್‌ಕುಮಾರ್ ಅಳಲು ತೋಡಿಕೊಂಡರು.
‘ಹೂವು ಬೆಳೆಯಿಂದ ನಷ್ಟ ಉಂಟಾಗಿದ್ದು, ದಿಕ್ಕು ತೋಚದಂತಾಗಿದೆ. ನನ್ನಂತೆ ಹಲವರು ಹೂವು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಸರ್ಕಾರ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇದೆ. ಆದರೆ ಹೂವಿನ ಬೆಳೆಯೇ ಕಡಿಮೆಯಾಗಿದ್ದು ಮಾರುಕಟ್ಟೆಗೆ ಬರುವ ಪ್ರಮಾಣವ ಕುಸಿದಿದೆ. ವ್ಯಾಪಾರವೂ ಇಲ್ಲ. ನಗರದಲ್ಲಿ ಹೂವು ಸಿಗುವುದು ಕಷ್ಟವಾಗಿದೆ–ಜಿ.ಎಂ. ದಿವಾಕರ್ ಅಧ್ಯಕ್ಷ ಕೆ.ಆರ್. ಮಾರುಕಟ್ಟೆ ವರ್ತಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.