ಬೆಂಗಳೂರು: ‘ನಗರದಲ್ಲಿರುವ ಲೇಡಿಸ್ ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳನ್ನು ಯಾವುದೇ ನೋಟಿಸ್ ನೀಡದೇ ಪೊಲೀಸರು ಬಂದ್ ಮಾಡಿಸಿದ್ದು, ಸಿಬ್ಬಂದಿ ನಿರುದ್ಯೋಗಿಗಳಾಗಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬಂದಿವೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಪುನರ್ ತೆರೆಯಲು ಅವಕಾಶ ನೀಡಬೇಕು’ ಎಂದು ಮಾಲೀಕರು ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.
ಕರ್ನಾಟಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಪ್ರತಿನಿಧಿಗಳು, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
'ಎಂ.ಜಿ. ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ 42 ಲೇಡಿಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿವೆ. ಇಲ್ಲಿಯ ಕೆಲಸ ನಂಬಿಕೊಂಡು 5000 ಸಿಬ್ಬಂದಿ ಜೀವನ ಸಾಗಿಸುತ್ತಿದ್ದರು. ಮೇ 25ರಂದು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಂದಿದ್ದ ಪೊಲೀಸರು, ಒತ್ತಾಯದಿಂದ ಬಾಗಿಲು ಮುಚ್ಚಿಸಿದ್ದಾರೆ. ಅಂದಿನಿಂದಲೂ ಸಿಬ್ಬಂದಿ ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ’ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
‘ಅಬಕಾರಿ ಕಾಯ್ದೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಕಾನೂನುಬದ್ಧವಾಗಿ ಅನುಮತಿ ಪಡೆದು ಲೇಡಿಸ್ ಬಾರ್ ನಡೆಸಲಾಗುತ್ತಿತ್ತು. ಯಾವುದೇ ನೋಟಿಸ್ ನೀಡದೇ ಪೊಲೀಸರು ಏಕಾಏಕಿ ಬಾಗಿಲು ಮುಚ್ಚಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಪೊಲೀಸ್ ಕಮಿಷನರ್ ಆದೇಶವಿರುವುದಾಗಿ ಹೇಳುತ್ತಿದ್ದಾರೆ’ ಎಂದು ಮನವಿಯಲ್ಲಿ ದೂರಿದ್ದಾರೆ.
ಭದ್ರತೆ ಒದಗಿಸಲು ಸಿದ್ಧ: ‘ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕಾನೂನು ಪ್ರಕಾರವೇ ಲೇಡಿಸ್ ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಈಗ ಅಧಿಕಾರ ವಹಿಸಿಕೊಂಡಿರುವ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಬಾರ್ ತೆರೆಯಲು ಯಾವುದೇ ಅವಕಾಶ ನೀಡುತ್ತಿಲ್ಲ’ ಎಂದು ಸಂಘದ ಅಧ್ಯಕ್ಷ ಪ್ರೇಮನಾಥ್ ಶೆಟ್ಟಿ ದೂರಿದರು.
‘ಮಹಿಳಾ ಸಿಬ್ಬಂದಿಗೆ ಭದ್ರತೆ ಒದಗಿಸಲು ನಾವು ಸಿದ್ಧರಿದ್ದೇವೆ. ಬಾರ್‌ಗೆ ಬರುವ ಹಾಗೂ ವಾಪಸು ಮನೆಗೆ ಹೋಗುವ ಸಂದರ್ಭದಲ್ಲಿ ಸುರಕ್ಷಿತವಾಗಿ ತಲುಪಿಸುವ ಹೊಣೆ ನಮ್ಮದು. ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸರು ಹೇಳುವ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ. ಹೀಗಾಗಿ, ಲೇಡಿಸ್ ಬಾರ್ ತೆರೆಯಲು ಅವಕಾಶ ನೀಡಿ’ ಎಂದೂ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.