ADVERTISEMENT

ಕೆರೆ, ರಾಜಕಾಲುವೆ ಮೀಸಲು ಪ್ರದೇಶಕ್ಕೆ ಕತ್ತರಿ

ಬಫರ್‌ ವಲಯ ತರಾತುರಿಯಲ್ಲಿ ಮರುನಿಗದಿ * ಜಲಮೂಲಗಳ ಅಸ್ತಿತ್ವಕ್ಕೆ ಕುತ್ತು?

ಪ್ರವೀಣ ಕುಮಾರ್ ಪಿ.ವಿ.
Published 23 ಜುಲೈ 2019, 19:31 IST
Last Updated 23 ಜುಲೈ 2019, 19:31 IST
   

ಬೆಂಗಳೂರು: ಅಲ್ಪಮತಕ್ಕೆ ಕುಸಿದಿದ್ದ ಮೈತ್ರಿ ಸರ್ಕಾರವು ಪತನಗೊಳ್ಳುವ ಮೂರು ದಿನಗಳ ಮುನ್ನ ಕೆರೆ ಕಾಲುವೆಗಳ ಮೀಸಲು ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಿ ತರಾತುರಿಯಲ್ಲಿ ಆದೇಶ ಮಾಡಿದೆ. ಕೆರೆ ಹಾಗೂ ಪ್ರಾಥಮಿಕ ರಾಜಕಾಲುವೆಗಳ ಮೀಸಲು ‍ಪ್ರದೇಶವನ್ನು 30 ಮೀಟರ್‌ಗೆ (ಅಂಚಿನಿಂದ) ನಿಗದಿಪಡಿಸಲಾಗಿದೆ.

ಸರ್ಕಾರವು ಜುಲೈ 20ರಂದು ಹೊರಡಿಸಿರುವ ಆದೇಶದ ಪ್ರಕಾರ ಕೆರೆ, ಕಾಲುವೆಗಳ ಮೀಸಲು ಪ್ರದೇಶವು 2015ರ ಪರಿಷ್ಕೃತ ನಗರ ಮಹಾಯೋಜನೆಯಲ್ಲಿ (ಆರ್‌ಎಂಪಿ) ನಿಗದಿಪಡಿಸಿದ್ದ ಪ್ರಮಾಣಕ್ಕಿಂತಲೂ ಬಹಳ ಕಡಿಮೆ ಇದೆ.

‘ಬಿಲ್ಡರ್‌ಗಳ ಲಾಬಿಗೆ ಮಣಿದು ಸರ್ಕಾರ ತಳೆದಿರುವ ಈ ನಿರ್ಧಾರದಿಂದ ಜಲಮೂಲಗಳ ಆಸುಪಾಸಿನಲ್ಲಿ ನಿರ್ಮಾಣ ಚಟುವಟಿಕೆ ಹೆಚ್ಚಲಿದೆ. ಭವಿಷ್ಯದಲ್ಲಿ ಕೆರೆ ಕಾಲುವೆಗಳ ಅಸ್ತಿತ್ವಕ್ಕೂ ಕುತ್ತು ತರಲಿದೆ’ ಎಂದು ಪರಿಸರ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2016ರ ಮೇ 4ರಂದು ನಗರದ ಕೆರೆ ಕಾಲುವೆಗಳ ಮೀಸಲು (ಬಫರ್) ಪ್ರದೇಶವನ್ನು ಮರುನಿಗದಿ ಮಾಡಿತ್ತು. ಕೆರೆಗಳ ಅಂಚಿನಿಂದ 75 ಮೀ, ಪ್ರಾಥಮಿಕ ರಾಜಕಾಲುವೆಗಳ ಅಂಚಿನಿಂದ 50 ಮೀ ಮೀಸಲು ಪ್ರದೇಶ ಕಾಯ್ದುಕೊಳ್ಳಬೇಕೆಂದು ಆದೇಶ ಮಾಡಿತ್ತು. ಈ ಆದೇಶವನ್ನು ಪೂರ್ವಾನ್ವಯಗೊಳಿಸುವಂತೆಯೂ ಸೂಚಿಸಿತ್ತು. ಇದನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಎನ್‌ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್‌ 2019ರ ಮಾರ್ಚ್ 5ರಂದು ರದ್ದುಪಡಿಸಿತ್ತು.

2019ರ ಜೂನ್ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲು ಪ್ರದೇಶಗಳನ್ನು ಮರುನಿಗದಿಪಡಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಜುಲೈ 6ರಂದು ಹಾಗೂ 18ರಂದು ವಿವಿಧ ಇಲಾಖೆಗಳ ಪ್ರಮುಖ ಸಭೆ ನಡೆಸಿದ್ದರು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ನೇತೃತ್ವದಲ್ಲಿ ಜುಲೈ 20ರಂದು ನಡೆದ ಸಭೆಯಲ್ಲಿ ಮೀಸಲು ಪ್ರದೇಶಗಳ ಮರುನಿಗದಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಪರಿಸರ ಕಾರ್ಯಕರ್ತರ ಆಕ್ರೋಶ

ಸರ್ಕಾರವು ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದೇ ತಪ್ಪು. ಎನ್‌ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬಳಿಕ ಕನಿಷ್ಠ ಪಕ್ಷ ಅದಕ್ಕಿಂತ ಮೊದಲು ಇದ್ದಷ್ಟಾದರೂ ಮೀಸಲು ಪ್ರದೇಶಗಳನ್ನು ಉಳಿಸಿಕೊಳ್ಳಬೇಕಿತ್ತು. ಸರ್ಕಾರ ಅದನ್ನೂ ಕಡಿಮೆ ಮಾಡಿದ್ದು ಸರಿಯಲ್ಲ ಎಂದು ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಭೂಗಳ್ಳರ ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಂತಿದೆ. ಎನ್‌ಜಿಟಿ ಆದೇಶ ಪೂರ್ವಾನ್ವಯಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪೋಣ. ಇನ್ನು ಮುಂದೆಯಾದರೂ ಕೆರೆ ಹಾಗೂ ರಾಜಕಾಲುವೆಗಳಿಗೆ ಎನ್‌ಜಿಟಿ ನಿಗದಿಪಡಿಸಿದಷ್ಟು ಮೀಸಲು ಪ್ರದೇಶ ಹೊಂದಲು ಅವಕಾಶ ಇತ್ತು. ಅದನ್ನು ಬಿಟ್ಟು 2015ರ ಆರ್‌ಎಂಪಿಯಲ್ಲಿ ಇದ್ದಷ್ಟು ಮೀಸಲು ಪ್ರದೇಶವನ್ನು ಉಳಿಸಿಕೊಳ್ಳಬೇಕಾಗಿಲ್ಲ ಎಂದರೆ ಏನರ್ಥ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಲಾಗದು’ ಎನ್ನುತ್ತಾರೆ ನೀರಿನ ಹಕ್ಕಿಗಾಗಿ ಜನಾಂದೋಲನದ ರಾಜ್ಯ ಸಂಚಾಲಕ ಈಶ್ವರಪ್ಪ ಮಡಿವಾಳಿ.

‘ನಮ್ಮಲ್ಲಿ ಮೀಸಲು ಪ್ರದೇಶ ನೆಪಮಾತ್ರಕ್ಕೆ ಇರುತ್ತದೆ. ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾದರೂ ಕೇಳುವವರಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅರ್ಕಾವತಿ ನಿವೇಶನದಾರರ ಸಂಘದ ಭಾಸ್ಕರ ರೆಡ್ಡಿ.

‘ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗೆ ಅವಕಾಶ ನೀಡಲೇಬಾರದು. ಆ ಜಾಗವನ್ನು ಸಂಪೂರ್ಣ ನೀರು ಹರಿಸುವುದು ಹಾಗೂ ಇಂಗಿಸುವುದಕ್ಕೆ ಬಳಸಿಕೊಳ್ಳಬೇಕು. ಅಲ್ಲಿ ರಸ್ತೆ, ಉದ್ಯಾನ ನಿರ್ಮಿಸಲು ಅವಕಾಶ ನೀಡಬಾರದು’ ಎಂದು ಅವರು ಅಭಿಪ್ರಾಯಪಟ್ಟರು.

ಹೆಚ್ಚಲಿದೆ ಪ್ರವಾಹ: ಕಳವಳ

‘ನಾಲ್ಕು ವರ್ಷಗಳಲ್ಲಿ ನಗರದಲ್ಲಿ ಭಾರಿ ಪ್ರವಾಹಗಳನ್ನು ಕಂಡಿದ್ದೇವೆ. ಕೆರೆ ಹಾಗೂ ಕಾಲುವೆಗಳ ಮೀಸಲು ಪ್ರದೇಶವನ್ನು ಮತ್ತಷ್ಟು ಕಡಿಮೆಗೊಳಿಸಿದರೆ ನೆರೆ ಹಾವಳಿ ಮತ್ತಷ್ಟು ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪರಿಸರ ಕಾರ್ಯಕರ್ತರು.

‘ಮನುಷ್ಯನ ದುರಾಸೆಗೆ ಕೊನೆ ಎಂಬುದೇ ಇಲ್ಲ. ನೀರನ್ನು ಯಾರಿಂದಲೂ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಮೀಸಲು ಪ್ರದೇಶವನ್ನು ಕಡಿಮೆಗೊಳಿಸಿದಷ್ಟೂ ಅದು ಇನ್ನೊಂದು ಕಡೆ ನುಗ್ಗಲಿದೆ. ಕೆರೆ ಕಾಲುವೆಗಳ ಆಸುಪಾಸಿನ ಪ್ರದೇಶವನ್ನು ದೊಡ್ಡ ಬಿಲ್ಡರ್‌ಗಳು ಕಬಳಿಸಿದರೆ, ತಗ್ಗುಪ್ರದೇಶದ ಮನೆಗಳನ್ನು ನೆರೆ ನೀರು ಕಬಳಿಸಲಿದೆ. ಎನ್‌ಜಿಟಿ ಆದೇಶ ಮಾಡಿದಷ್ಟು ಪ್ರಮಾಣದಲ್ಲಾದರೂ ಮೀಸಲು ಪ್ರದೇಶವನ್ನು ಉಳಿಸಿಕೊಳ್ಳಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ಮೀಸಲು ಪ್ರದೇಶ ಯಾವುದಕ್ಕೆ ಎಷ್ಟು (ಮೀ.ಗಳಲ್ಲಿ)

ಜಲಮೂಲ; 2015ರ ಆರ್‌ಎಂಪಿ; 2016ರ ಎನ್‌ಜಿಟಿ ಆದೇಶ; 2019ರ ಆದೇಶ

ಕೆರೆ; 30; 75; 30

ಪ್ರಾಥಮಿಕ ರಾಜಕಾಲುವೆ; 50 (ಮಧ್ಯದಿಂದ; 50 (ಅಂಚಿನಿಂದ); 30 (ಅಂಚಿನಿಂದ)

ದ್ವಿತೀಯ ಹಂತದ ಕಾಲುವೆ; 25; 35; 15

ತೃತೀಯ ಹಂತದ ಕಾಲುವೆ; 15; 25; 10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.