ಬೆಂಗಳೂರು: ಕಲುಷಿತಗೊಂಡಿದ್ದ ನೆಲಗದರನಹಳ್ಳಿ ಮತ್ತು ಶಿವಪುರ ಕೆರೆಗಳ ಪುನರುಜ್ಜೀವನಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ದೊರೆತಿದೆ.
ಈ ಭಾಗದ ಗ್ರಾಮಗಳ ಜನರ ಜೀವನಾಡಿಯಂತಿದ್ದ ಈ ಕೆರೆಗಳು ನಗರ ಬೆಳೆದಂತೆ ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಹರಿದು ಕಲುಷಿತಗೊಂಡಿದ್ದವು. ಇವುಗಳ ಪುನರುಜ್ಜೀವನ ಕಾಮಗಾರಿ ಆರಂಭವಾಗಿದ್ದು, ಕೆರೆಯ ಸುತ್ತಲೂ ಏರಿ, ನಡಿಗೆ ಪಥ ನಿರ್ಮಿಸಲಾಗುವುದು. ಅಲ್ಲಲ್ಲಿ ಬೆಂಚ್‌ಗಳನ್ನು ಅಳವಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಒಳಚರಂಡಿ ನೀರು ಕೆರೆಗೆ ಬರುವುದನ್ನು ತಪ್ಪಿಸಿ ಮಳೆ ನೀರು ಮಾತ್ರ ಕೆರೆಗೆ ಸೇರುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ₹4 ಕೋಟಿ ವೆಚ್ಚದಲ್ಲಿ ನೆಲಗದರನಹಳ್ಳಿ ಕೆರೆ ಮತ್ತು ₹2 ಕೋಟಿ ವೆಚ್ಚದಲ್ಲಿ ಶಿವಪುರ ಕೆರೆ ಅಭಿವೃದ್ಧಿಯಾಗಲಿದೆ ಎಂದು ಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿದ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ತಿಳಿಸಿದರು.
‘30 ವರ್ಷಗಳ ಹಿಂದೆ ಈ ಎರಡು ಕೆರೆಗಳಲ್ಲಿನ ನೀರನ್ನು ಜನ ಕುಡಿಯಲು ಬಳಸುತ್ತಿದ್ದರು. ಬಳಿಕ ಕುಲುಷಿತಗೊಂಡಿದ್ದರಿಂದ ದನ–ಕರುಗಳು ನೀರು ಕುಡಿಯಲೂ ಸಾಧ್ಯವಾಗದ ಸ್ಥಿತಿ ಇತ್ತು. ಪುನರುಜ್ಜೀವನ ಕಾಮಗಾರಿಗೆ ಈಗ ಚಾಲನೆ ನೀಡಲಾಗಿದೆ. ಎರಡೂ ಗ್ರಾಮಗಳು ಮತ್ತು ಸುತ್ತಮುತ್ತಲ ಜನರಿಗೆ ಅನುಕೂಲ ಆಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.