ADVERTISEMENT

ಲಾಲ್‌ಬಾಗ್‌: ಹದಗೆಟ್ಟಿದ್ದ ವಾಕಿಂಗ್‌ ಪಥ ದುರಸ್ತಿ

ಜನಸ್ಪಂದನ ಫಾಲೋ ಅಪ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 5:58 IST
Last Updated 20 ಮಾರ್ಚ್ 2019, 5:58 IST
‘ಸಿದ್ದಾಪುರ ಗೇಟ್‌’ ಬಳಿಯ ದ್ವಾರವನ್ನೂ ದುರಸ್ತಿಗೊಳಿಸಲಾಗಿದೆ
‘ಸಿದ್ದಾಪುರ ಗೇಟ್‌’ ಬಳಿಯ ದ್ವಾರವನ್ನೂ ದುರಸ್ತಿಗೊಳಿಸಲಾಗಿದೆ   

ಬೆಂಗಳೂರು: ಲಾಲ್‌ಬಾಗ್‌ನ ಉದ್ಯಾನದಕೆರೆ ಹತ್ತಿರ ಹದಗೆಟ್ಟಿದ್ದ ವಾಕಿಂಗ್‌ ಪಥಸದ್ಯ ದುರಸ್ತಿಯಾಗಿದ್ದು, ನಡಿಗೆದಾರರು ನೆಮ್ಮದಿಯಾಗಿ ಓಡಾಡುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ದಾಪುರ ಗೇಟ್‌ ಬಳಿಯ ‘ತಿರುಗುವ ದ್ವಾರ’ವನ್ನೂ ದುರಸ್ತಿ ಮಾಡಲಾಗಿದೆ.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡಿಗೆದಾರರು ಈ ಸಮಸ್ಯೆಗಳ ಬಗೆಗೆ ಗಮನಸೆಳೆದಿದ್ದರು.

‘ಗಾಜಿನ ಮನೆಯ ಎಡಭಾಗದಲ್ಲಿ ಪರಿಸರಸ್ನೇಹಿ ಶೌಚಾಲಯವನ್ನು ಹೊಸದಾಗಿ ನಿರ್ಮಿಸಲಾಗಿದ್ದು, ನಸುಕಿನಲ್ಲಿ ವಾಯುವಿಹಾರ ಹಾಗೂ ವ್ಯಾಯಾಮಕ್ಕಾಗಿ ಬರುವವರಿಗೆ ಅನುಕೂಲವಾಗುವಂತೆ ಎಲ್ಲ ಉದ್ಯಾನಗಳನ್ನು ಬೆಳಿಗ್ಗೆ 5.30ರಿಂದಲೇ ತೆರೆಯುವಂತೆ ಆದೇಶಿಸಲಾಗಿದೆ. ಸ್ವಚ್ಛತೆ ಕಾಪಾಡುವಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ’ಎಂದು ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್‌) ಉಪ ನಿರ್ದೇಶಕ ಚಂದ್ರಶೇಖರ್‌ ಮಾಹಿತಿ ನೀಡಿದರು.

ADVERTISEMENT

‘ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧಿಸಲು ತೋಟಗಾರಿಕೆ ಇಲಾಖೆ ಒಂದೂವರೆ ತಿಂಗಳ ಹಿಂದೆ ನಿರ್ಣಯ ಕೈಗೊಂಡಿತ್ತು. ಸದ್ಯ ಚುನಾವಣೆ ನಿಮಿತ್ತ ಅದರ ಅನುಷ್ಠಾನ ಮುಂದೂಡಲಾಗಿದೆ’ ಎಂದು ಅವರು ಹೇಳಿದರು.

‘ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ನಿರ್ದೇಶಕರೂ ಸೇರಿದಂತೆ ಯಾವುದೇ ಅಧಿಕಾರಿಗಳ ವಾಹನಗಳು ಲಾಲ್‌ಬಾಗ್‌ ಉದ್ಯಾನದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು ಸೂಚಿಸಿದ್ದರು. ಇಲಾಖೆಯ ಹೊಸ ನಿರ್ದೇಶಕರಾಗಿರುವ ಡಾ. ಎಂ.ವಿ. ವೆಂಕಟೇಶ್‌ ಅವರೀಗ ಚುನಾವಣಾ ಕಾರ್ಯದ ಒತ್ತಡದಲ್ಲಿ ಇರುವುದರಿಂದ ಬಳಿಕ ಸಭೆ ನಡೆಸುತ್ತೇವೆ’ ಎಂದು ಅವರು ವಿವರಿಸಿದರು.

‘ಉದ್ಯಾನದ ಪಶ್ಚಿಮ ದ್ವಾರದ ಬಳಿಯ ‘ಕೈ ಮುಗಿದು ಒಳಗೆ ಬಾ’ ಎಂಬ ಫಲಕ ಹಾಗೂ ಪ್ರವೇಶ ದ್ವಾರದ ಬಳಿ ಇದ್ದ ಟಿಕೆಟ್‌ ವಿತರಣಾ ಕೌಂಟರ್‌ ಅನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಈ ಕುರಿತು ಜನಸ್ಪಂದನದಲ್ಲಿ ಸಲಹೆ
ಕೇಳಿಬಂದಿತ್ತು’ ಎಂದು ಅವರು ಹೇಳಿದರು.

‘ಉದ್ಯಾನದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸಿ ಡಾಂಬರು ಹಾಕಿಸಲು ಸುಮಾರು ₹3 ಕೋಟಿ ಅಗತ್ಯವಿರುವುದರಿಂದ ಇದಕ್ಕೆ ನಿರ್ದೇಶಕರ ಅನುಮತಿ ಪಡೆಯಬೇಕಿದೆ. ಸದ್ಯ ಅವರು ಚುನಾವಣೆ ನಿಮಿತ್ತ ಹಲವು ಕಾರ್ಯಗಳಲ್ಲಿ ತೊಡಗಿರುವುದರಿಂದ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

ಹೆಚ್ಚುವರಿ ಕ್ಯಾನ್‌ಗಳ ವ್ಯವಸ್ಥೆ

‘ಬಿಸಿಲಿನಿಂದ ಬಳಲಿ ನೆರಳನರಸಿ ಬರುವವರ ದಾಹ ತಣಿಸಲು ಕುಡಿಯುವ ನೀರಿನ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದ್ದು,ಹೆಚ್ಚುವರಿಯಾಗಿ ಮೂರು ಕ್ಯಾನ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಎಂ.ಜಗದೀಶ್‌ ತಿಳಿಸಿದರು.

‘ಉದ್ಯಾನದಲ್ಲಿ ಏಳು ಕಡೆ ಕುಡಿಯುವ ನೀರಿಗಾಗಿ ಕೊಳಾಯಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 5 ಕಡೆ ಕ್ಯಾನ್‌ಗಳ ಮೂಲಕ ನೀರು ಒದಗಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ನೀರು ಇಲ್ಲದಿದ್ದಲ್ಲಿ ಅಲ್ಲಿ ಸೂಚಿಸಲಾದ ಮೊಬೈಲ್‌ ನಂಬರ್‌ಗೆ ಕರೆ ಮಾಡಬಹುದು’ ಎಂದು ಹೇಳಿದರು.

ಮಾರ್ಚ್‌ 11 ರಂದು ಪ್ರಜಾವಾಣಿ ‘ಬಾಯಾರಿ ಬರುವವರಿಗೆ ನೀರಿಲ್ಲ...’ ಎಂಬ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.