ಬೆಂಗಳೂರು: ಲಾಲ್‌ಬಾಗ್ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ‘ವಿಶ್ವಗುರು’ ಬಸವಣ್ಣ ಹಾಗೂ ವಚನ ಸಾಹಿತ್ಯ ಆಧಾರಿತ ಫಲ–ಪುಷ್ಪ ಪ್ರದರ್ಶನದಲ್ಲಿ ಅಂತಿಮ ದಿನ 76,500 ಜನ ಭಾಗವಹಿಸಿದ್ದರು. ಪ್ರವೇಶ ಶುಲ್ಕವಾಗಿ ಒಟ್ಟು ₹37.5 ಲಕ್ಷ ಸಂಗ್ರಹವಾಗಿದೆ.
ಭಾನುವಾರ ಶಾಲಾ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಂಡೋಪತಂಡವಾಗಿ ಲಾಲ್‌ಬಾಗ್‌ನತ್ತ ಬರುತ್ತಿದ್ದರು. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನಸಂದಣಿ ಹೆಚ್ಚಿತ್ತು.
ಲಾಲ್‌ಬಾಗ್ ಮುಖ್ಯ ಗೇಟ್‌ನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಬೀದಿ ಬದಿ ವ್ಯಾಪಾರಿಗಳು ಹೆಚ್ಚಾಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಲಾಲ್‌ಬಾಗ್ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಖರೀದಿಗೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು. ಬಿಎಂಟಿಸಿ ಬಸ್‌ಗಳೆಲ್ಲ ಭರ್ತಿಯಾಗಿದ್ದವು. ಶಾಂತಿನಗರ ಬಸ್ ನಿಲ್ದಾಣದಿಂದ ಲಾಲ್‌ಬಾಗ್‌ನ ಗೇಟ್‌ವರೆಗೆ, ಉದ್ಯಾನದ ವೆಸ್ಟ್‌ಗೇಟ್‌ನ ಪಾದಚಾರಿ ಮಾರ್ಗಗಳಲ್ಲಿ ಕಿರು ಮಾರುಕಟ್ಟೆಗಳು ಸೃಷ್ಟಿಯಾಗಿದ್ದವು.
ಗಾಜಿನ ಮನೆಯಲ್ಲಿ ಬಸವಣ್ಣ ಹಾಗೂ ವಚನ ಸಾಹಿತ್ಯದ ಪುಷ್ಪಗಳ ಮಾದರಿಯನ್ನು ನೋಡಲು ಬಂದಿದ್ದ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
‘ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಜನವರಿ 18ರಿಂದ 28ರವರೆಗೆ ಒಟ್ಟು 5.61 ಲಕ್ಷ ಜನ ಭೇಟಿ ನೀಡಿದ್ದು, ಒಟ್ಟು ₹2.59 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.