ಬೆಂಗಳೂರು: ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ’ ವೀಕ್ಷಿಸಲು ಅಂತಿಮ ದಿನ ಜನಸಾಗರವೇ ಹರಿದುಬಂದಿತ್ತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಮಂಗಳವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಂಡೋಪತಂಡವಾಗಿ ಲಾಲ್‌ಬಾಗ್‌ನತ್ತ ಬರುತ್ತಿದ್ದರು. ಸಂಜೆ ವೇಳೆ ಎತ್ತ ನೋಡಿದರೂ ಜನಜಾತ್ರೆ. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನಸಂದಣಿ ಹೆಚ್ಚಿತ್ತು.
ಉದ್ಯಾನದಲ್ಲಿ ಎಲ್ಲಿ ನೋಡಿದರು ತ್ರಿವರ್ಣ ಧ್ವಜಗಳೇ ಕಾಣುತ್ತಿದ್ದವು. ವಿದ್ಯಾರ್ಥಿಗಳು, ಯುವಕರು ‘ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಮೇರಾ ಭಾರತ್ ಮಹಾನ್ ಹೈ’ ಎಂಬ ಜಯಘೋಷ ಕೂಗುತ್ತಿದ್ದರು.
ಲಾಲ್‌ಬಾಗ್ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಬೀದಿ ವ್ಯಾಪಾರಿಗಳ ಹಾವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಲಾಲ್‌ಬಾಗ್ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಖರೀದಿಗೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು. ಬಿಎಂಟಿಸಿ ಬಸ್‌ಗಳೆಲ್ಲ ತುಂಬಿತುಳಕುತ್ತಿದ್ದವು. ಶಾಂತಿನಗರ ಬಸ್ ನಿಲ್ದಾಣದಿಂದ ಲಾಲ್‌ಬಾಗ್‌ನ ಗೇಟಿನವರೆಗೆ, ಉದ್ಯಾನದ ವೆಸ್ಟ್‌ಗೇಟ್‌ನ ಪಾದಚಾರಿ ಮಾರ್ಗಗಳೆಲ್ಲಿ ಕಿರು ಮಾರುಕಟ್ಟೆಗಳು ಸೃಷ್ಟಿಯಾಗಿದ್ದವು.
ಲಾಲ್‌ಬಾಗ್‌ನ ನಾಲ್ಕು ಗೇಟ್‌ಗಳಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ಟಿಕೆಟ್ ನೀಡಲು ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.
ಗಾಜಿನ ಮನೆಯಲ್ಲಿ ಪುಷ್ಪಗಳಲ್ಲಿ ಅರಳಿದ ವಿಧಾನಸೌಧ ನೋಡಲು ಬಂದಿದ್ದ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಮಂಗಳವಾರ ಸಸ್ಯಕಾಶಿಗೆ ಭೇಟಿ ವಯಸ್ಕರು;198000 ಮಕ್ಕಳು;19250 ಶಾಲಾ ಮಕ್ಕಳು;28500 ಒಟ್ಟು;245750 ಸಂಗ್ರಹವಾದ ಹಣ; ₹81.5 ಲಕ್ಷ ––– ಆಗಸ್ಟ್ 5ರಿಂದ 15ರವರೆಗೆ ಒಟ್ಟು ಭೇಟಿ ವಯಸ್ಕರು;582807 ಮಕ್ಕಳು;68745 ಶಾಲಾ ಮಕ್ಕಳು;175000 ಒಟ್ಟು;826552 ಒಟ್ಟು ಸಂಗ್ರಹವಾದ ಪ್ರವೇಶ ಶುಲ್ಕ;₹3.67 ಕೋಟಿ ––– ಒಟ್ಟು ಸಂಗ್ರಹ ಪ್ರವೇಶ ಶುಲ್ಕ;₹36794000 ಮಳಿಗೆ ಬಾಡಿಗೆ;₹2745000 ಪ್ರದರ್ಶಕರಿಂದ ಸಂಗ್ರಹವಾದ ಶುಲ್ಕ;₹291800 ಫಲಪುಷ್ಪ ಪ್ರದರ್ಶನದಲ್ಲಿ ಸಂಗ್ರಹವಾದ ಒಟ್ಟು ಮೊತ್ತ;₹39830800
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.