ADVERTISEMENT

ಲಾಲ್‌ಬಾಗ್‌: ಪುಷ್ಪಗಳಲ್ಲಿ ಅರಳಲಿದೆ ಶಕ್ತಿ ಕೇಂದ್ರ ‘ವಿಧಾನಸೌಧ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 15:58 IST
Last Updated 26 ಜುಲೈ 2023, 15:58 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (ಸಂಗ್ರಹ ಚಿತ್ರ)
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (ಸಂಗ್ರಹ ಚಿತ್ರ)   

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಆಗಸ್ಟ್ 4ರಿಂದ 15ರವರೆಗೆ ಲಾಲ್‌ಬಾಗ್‌ನಲ್ಲಿ ‘ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ’ ಅವರ ವಿಷಯಾಧಾರಿತ 214ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಕೆಂಗಲ್‌ ಹನುಮಂತ್ಯಯ ಅವರ ಸಾಧನೆಯನ್ನು ಬಣ್ಣ–ಬಣ್ಣದ ಪುಷ್ಪಗಳಲ್ಲಿ ಅನಾವರಣಗೊಳಿಸಲು ತೋಟಗಾರಿಕೆ ಇಲಾಖೆ ಸಜ್ಜಾಗುತ್ತಿದೆ.

‘ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ₹2.5 ಕೋಟಿ ವೆಚ್ಚವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ದೇಶದ ಬೇರೆ ಬೇರೆ ರಾಜ್ಯಗಳಿಂದ ತರಹೇವಾರಿ ಹೂವಿನ ಕುಂಡಗಳನ್ನು ಈಗಾಗಲೇ ತೆಗೆದುಕೊಂಡು ಬರಲಾಗಿದೆ. ಗಾಜಿನ ಮನೆಯ ಒಳಾಂಗಣದಲ್ಲಿ ವಿಧಾನಸೌಧ, 14 ಅಡಿ ಎತ್ತರದ ಕೆಂಗಲ್‌ ಹನುಮಂತಯ್ಯ ಪ್ರತಿಮೆ, ಶಿವಪುರ ಸತ್ಯಾಗ್ರಹ ಸೌಧ, ಕೋಲಾರದ ಹಟ್ಟಿ ಚಿನ್ನದ ಗಣಿ ರಾಷ್ಟ್ರೀಕರಣದಂತಹ ಐತಿಹಾಸಿಕ ಘಟನೆಗಳನ್ನು ಹೂವಿನ ಕಲಾಕೃತಿಗಳಲ್ಲಿ ಮರುಸೃಷ್ಟಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾಹಿತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಕೆಂಗಲ್‌ ಹನುಮಂತಯ್ಯ ಅವರು ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಮಾಡಿದ ಸುಧಾರಣೆಗಳು, ಲಾಭದಾಯಕ ರೈಲ್ವೆ ಬಜೆಟ್‌ ಮಂಡನೆ ಎಂಬ ಪರಿಕಲ್ಪನೆಗಳನ್ನು ಪುಷ್ಪಗಳ ಮೂಲಕ ಅನಾವರಣ ಮಾಡಲಾಗುವುದು. ಕರ್ನಾಟಕ ಏಕೀಕರಣಕ್ಕೆ ಸಂಬಂಧಪಟ್ಟಂತೆ, ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಿರುವ ಬಗ್ಗೆ ಮಾಹಿತಿ ನೀಡುವ ಕೆಲಸಗಳನ್ನು ಮಾಡಲಾಗುವುದು’ ಎಂದರು.

ಆಗಸ್ಟ್‌ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಶಾಸಕ ಉದಯ್‌ ಬಿ. ಗರುಡಾಚಾರ್ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.