ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿರುವ ದೇಶ ವಿದೇಶಗಳ ಸಾವಿರಾರು ಸಸ್ಯ ಪ್ರಭೇದಗಳ ಮಾಹಿತಿ ಇನ್ನು ಕೆಲವೇ ದಿನಗಳಲ್ಲಿ ಬೆರಳ ತುದಿಯಲ್ಲಿ ಸಿಗಲಿದೆ. ಇದಕ್ಕಾಗಿ ‘ಸಸ್ಯಕಾಶಿ’ಗೆ ಡಿಜಿಟಲ್ ದಾಖಲಾತಿ ರೂಪ ನೀಡುವ ಕಾರ್ಯ ನಡೆಯುತ್ತಿದೆ.
ಲಾಲ್‌ಬಾಗ್ ಉದ್ಯಾನದಲ್ಲಿರುವ ಸಸ್ಯ ಪ್ರಭೇದಗಳ ಸಂರಕ್ಷಿತ ಸಸ್ಯ ಮಾದರಿ ಸಂಗ್ರಹ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಲು ಸಹಕಾರಿಯಾಗುವಂತೆ ಸಸ್ಯ ಪ್ರಭೇದಗಳ ಪರ್ಣ ಸಂಗ್ರಹ(ಹರ್ಬೇರಿಯಂ)’ ಕೈಗೊಳ್ಳಲಾಗಿದೆ. ಉದ್ಯಾನದಲ್ಲಿನ ಎಲ್ಲ ಸಸ್ಯಗಳನ್ನು ಹೀಗೆ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈ ಹರ್ಬೇರಿಯಂ ಶೀಟ್‌ಗಳನ್ನು ಇಡಲು ಉತ್ತರಪ್ರದೇಶದ ಲಖನೌದಿಂದ ನಾಲ್ಕು ರ್‍ಯಾಕ್‌ಗಳನ್ನು ತರಿಸಲಾಗಿದೆ. ಅದರಲ್ಲಿ ಈ ಹರ್ಬೇರಿಯಂಗಳನ್ನು ಕ್ರಮ ಸಂಖ್ಯೆ ಆಧಾರಿತವಾಗಿ ಜೋಡಿಸಿಡಲಾಗುತ್ತಿದೆ.
ಸಸ್ಯದ ಮೂಲ ಹೆಸರು, ಉಗಮ ಸ್ಥಾನ, ದೇಶ, ಬೆಳವಣಿಗೆ, ಬೆಳೆಯುವ ಹವಾಗುಣ, ಹೂ–ಹಣ್ಣು ಮತ್ತು ಎಲೆಗಳು ಬಿಡುವ ಕಾಲ, ಅದರ ವೈಜ್ಞಾನಿಕ ಹೆಸರು ಸಹಿತ ಎಲ್ಲ ಮಾಹಿತಿಗಳು ಒಳಗೊಂಡಿರುತ್ತದೆ. ಜೊತೆಗೆ ಆ ಸಸ್ಯಗಳ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿಡುವ ಕಾರ್ಯವೂ ನಡೆಯುತ್ತಿದೆ. ಇದು ಸಸ್ಯಗಳನ್ನು ಗುರುತಿಸಲು ಸಹಾಯಕವಾಗಲಿದೆ.
‘ಜೀವವೈವಿಧ್ಯ ಶಾಸ್ತ್ರಜ್ಞ ಕೇಶವಮೂರ್ತಿ ಅವರ ನೇತೃತ್ವದ ವಿಜ್ಞಾನಿಗಳ ತಂಡವು ಕಳೆದ ಒಂದು ವರ್ಷದಿಂದ ದಾಖಲಾತಿ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಲಾಲ್‌ಬಾಗ್‌ನ ಸಸ್ಯ ಸಂಪತ್ತಿನ ಸಂಪೂರ್ಣ ಮಾಹಿತಿ ‘ಪ್ಲಾಂಟ್ ವೆಲ್ತ್ ಆಫ್ ಲಾಲ್‌ಬಾಗ್’ ಎಂಬ ಪುಸ್ತಕದ ಜೊತೆಗೆ ಕ್ಯೂ–ಆರ್ ಕೋಡ್ ರೂಪದಲ್ಲಿ ಲಭ್ಯವಾಗಲಿದೆ. ಇನ್ನು ಒಂದು ವರ್ಷದೊಳಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ 950 ಹರ್ಬೇರಿಯಂಗಳನ್ನು ಸಂಗ್ರಹಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಸಸ್ಯವಿಜ್ಞಾನ ವಿದ್ಯಾರ್ಥಿಗಳಿಗೆ, ಗಿಡ–ಮರಗಳ ಬಗ್ಗೆ ಕುತೂಹಲ ಇರುವವರಿಗೆ, ಜೀವ ವೈವಿಧ್ಯ ಅಧ್ಯಯನಕಾರರಿಗೆ ಇದರಿಂದ ಅನುಕೂಲವಾಗಲಿದೆ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಸಂರಕ್ಷಿಸಲೂ ಈ ದಾಖಲಾತಿ ನೆರವಾಗಲಿದೆ. ಜಗತ್ತಿನ ಪ್ರಮುಖ ಸಸ್ಯೋದ್ಯಾನಗಳ ಜತೆ ಪ್ರಭೇದಗಳ ವಿನಿಮಯ ಯೋಜನೆ ನಡೆಸಲು ಸಹ ಇದರಿಂದ ಸಾಧ್ಯವಾಗಲಿದೆ’ ಎಂದು ಲಾಲ್‌ಬಾಗ್ ಉಪನಿರ್ದೇಶಕಿ ಜಿ. ಕುಸುಮಾ ತಿಳಿಸಿದರು.
ಹರ್ಬೇರಿಯಂ ಎಂದರೇನು?
‘ಸಸ್ಯ ಪ್ರಭೇದಗಳ ವಿವಿಧ ಭಾಗಗಳನ್ನು ಒಣಗಿಸಿ ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಮಾದರಿಗೆ ಹರ್ಬೇರಿಯಂ ಎಂದು ಕರೆಯಲಾಗುತ್ತದೆ. ಸಸ್ಯಗಳ ಹೂವು ಹಣ್ಣು ಕಾಯಿ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಒಂದು ಹಾಳೆಯಲ್ಲಿ ಹೊಲಿಗೆ ಹಾಕಿ ಒಣಗಿಸಲಾಗುತ್ತದೆ. ಅದರಲ್ಲಿ ಸಸ್ಯದ ಕುರಿತ ಸಂಕ್ಷಿಪ್ತ ಮಾಹಿತಿ ಸೇರಿಸಲಾಗಿರುತ್ತದೆ. ಸಸ್ಯಗಳನ್ನು ಗುರುತಿಸಲು ಈ ಪ್ರಕ್ರಿಯೆ ಸಹಾಯಕವಾಗುತ್ತದೆ’ ಎಂದು ಕೇಶವಮೂರ್ತಿ ತಿಳಿಸಿದರು. ‘ಒಂದು ಹರ್ಬೇರಿಯಂ ಶೀಟ್ ತಯಾರಿಸಲು 15ರಿಂದ 20 ದಿನಗಳು ಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.