ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ತುರ್ತು ಚಿಕಿತ್ಸೆ ನೀಡಲು ಆರಂಭಿಸಿದ್ದ ‘ಲಾಲ್‌ಬಾಗ್ ಆಸ್ಪತ್ರೆ’ ಮೂರು ವರ್ಷಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ಸೇವೆ ಒದಗಿಸಿದೆ.
ಉದ್ಯಾನಕ್ಕೆಭೇಟಿ ನೀಡುವ ಪ್ರವಾಸಿಗರು, ವಾಯುವಿಹಾರಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ, ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು 2019ರಲ್ಲಿ ಈ ಕಿರು ಆರೋಗ್ಯ ಕೇಂದ್ರವನ್ನು ಆರಂಭಿಸಿತ್ತು. ಉದ್ಯಾನದ ಗಾಜಿನ ಮನೆ ಸಮೀಪವೇ ಈ ಚಿಕಿತ್ಸಾ ಕೇಂದ್ರವಿದ್ದು, ಸೇವೆ ಒದಗಿಸಲು ಒಬ್ಬರು ಶುಶ್ರೂಷಕಿಯನ್ನೂ ಇಲಾಖೆ
ನಿಯೋಜಿಸಿದೆ.
ನೂರಾರು ಎಕರೆಗಳಷ್ಟು ವಿಸ್ತಾರವಾಗಿರುವ ಉದ್ಯಾನಕ್ಕೆ ಪ್ರತಿದಿನ ಸಾವಿರಾರು ಮಂದಿ ವಾಯುವಿಹಾರಿಗಳು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕೇಂದ್ರವನ್ನು ಆರಂಭಿಸಿದ್ದ ಇಲಾಖೆಯು ಸಾರ್ವಜನಿಕರಿಗೆ ಉಚಿತ ಸೇವೆ
ಒದಗಿಸುತ್ತಿದೆ.
ಜೇನುನೊಣಗಳ ದಾಳಿ, ಕೀಟಗಳ ಕಡಿತ ಅಥವಾ ಹಾವು ಕಚ್ಚಿದ ಸಂದರ್ಭಗಳಲ್ಲಿ ಶೀಘ್ರವೇ ತುರ್ತು ಚಿಕಿತ್ಸೆ ಇಲ್ಲಿ ಲಭ್ಯ.ಪ್ರತಿನಿತ್ಯ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಈ ಆರೋಗ್ಯ ಕೇಂದ್ರವು ತೆರೆದಿರುತ್ತದೆ. ದಿನವಿಡೀ ಸೇವೆ ಒದಗಿಸಲು ವೈದ್ಯರ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರಕ್ಕೆ ಇಲಾಖೆ ಪ್ರಸ್ತಾವ ಸಲ್ಲಿಸಿದೆ.
‘ವಾಯುವಿಹಾರಕ್ಕೆ ಬರುತ್ತಿದ್ದ ವಯಸ್ಸಾದವರೂ ಆರೋಗ್ಯ ತಪಾಸಣೆಗೆ ಇಲ್ಲಿಗೆ ಬರುತ್ತಿದ್ದಾರೆ. ಮೊದಲಿಗೆ ದಿನಕ್ಕೆ 70ಕ್ಕೂ ಹೆಚ್ಚು ಮಂದಿ ಬರುತ್ತಿದ್ದರು. ಕೋವಿಡ್‌ನಿಂದ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು. ಈಗ ವಾರಾಂತ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚು ಇರುತ್ತದೆ’ಎಂದು ಶುಶ್ರೂಷಕಿ ಸುಪ್ರಿತಾ ಹೇಳಿದರು.
‘ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ವಾಯುವಿಹಾರದ ವೇಳೆ ಸುಸ್ತಾದವರೂ ಬಂದು ವಿಶ್ರಾಂತಿ ಪಡೆಯುತ್ತಾರೆ. ಇದಕ್ಕಾಗಿ ಹಾಸಿಗೆ ವ್ಯವಸ್ಥೆ ಇದೆ. ಜ್ವರ, ಬೇಧಿ, ವಾಂತಿ, ತಲೆನೋವು ಸಮಸ್ಯೆಗಳಿಗೆ ಚುಚ್ಚುಮದ್ದು ಹಾಗೂ ಮಾತ್ರೆ ನೀಡಲಾಗುವುದು’ ಎಂದು ವಿವರಿಸಿದರು.
‘ಉದ್ಯಾನದಲ್ಲಿ ಆಟವಾಡುವಾಗ ಬಿದ್ದು ಗಾಯಗೊಂಡವರಿಗೆ ಡ್ರೆಸ್ಸಿಂಗ್ ಮಾಡಲಾಗುವುದು. ನಾಯಿ ಕಚ್ಚಿದ ಹಲವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಂದವರಿಗೂ ತುರ್ತು ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗಳಿಗೆ ಸಾಗಿಸುವ ವ್ಯವಸ್ಥೆಯೂ ಇದೆ’ ಎಂದರು.
ಅಂಕಿ ಅಂಶ
50
ಆಸ್ಪತ್ರೆಗೆ ಪ್ರತಿನಿತ್ಯ ಬರುವ ರೋಗಿಗಳು (ಕನಿಷ್ಠ)
ಬೆಳಿಗ್ಗೆ 6.30ರಿಂದ ಮಧ್ಯಾಹ್ನ 1.30
ಆಸ್ಪತ್ರೆಯ ಸಮಯ
ಪ್ರವೇಶ ದ್ವಾರಗಳಲ್ಲಿ ಗಾಲಿಕುರ್ಚಿ
‘ಉದ್ಯಾನಕ್ಕೆ ಬರುವ ಪ್ರವಾಸಿಗರು ಹಾಗೂ ವಾಯುವಿಹಾರಿಗಳ ಅನುಕೂಲಕ್ಕಾಗಿ ಉದ್ಯಾನದ ನಾಲ್ಕೂ ಪ್ರವೇಶದ್ವಾರಗಳಲ್ಲಿ ತಲಾ ಒಂದು ಗಾಲಿ ಕುರ್ಚಿ ಇರಿಸಿದ್ದೇವೆ. ವಯಸ್ಸಾದವರು, ನಡೆಯಲು ಸಾಧ್ಯವಾಗದವರು ಹಾಗೂ ವಾಯುವಿಹಾರಕ್ಕೆ ಬರುವ ರೋಗಿಗಳು ಇದನ್ನು ಬಳಸಿಕೊಳ್ಳಬಹುದು’ ಎಂದುತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಲಾಲ್‌ಬಾಗ್) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಾಲಿಕುರ್ಚಿಯನ್ನು ಉಚಿತವಾಗಿ ಒದಗಿಸುತ್ತೇವೆ. ಆದರೆ ಭದ್ರತಾ ದೃಷ್ಟಿಯಿಂದ ₹100 ಠೇವಣಿ ಇಡಬೇಕು. ಉದ್ಯಾನ ಸುತ್ತಿ ಹಿಂದಿರುಗುವಾಗ ಅವರಿಗೆ ಅದನ್ನು ಮರಳಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.