ADVERTISEMENT

ಫಾಕ್ಸ್‌ಕಾನ್‌ ಭೂಸ್ವಾಧೀನ | ಪರಿಹಾರದ ಮೊತ್ತ ನ್ಯಾಯಾಲಯದಲ್ಲಿ ಠೇವಣಿ: ಕೆಐಎಡಿಬಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 16:03 IST
Last Updated 3 ಮೇ 2024, 16:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಫಾಕ್ಸ್‌ಕಾನ್‌ ಕಂಪನಿಗೆ ವಿತರಿಸಲು ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವ 300 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ತಿಳಿಸಿದೆ.

ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬೇಲಿ ನಿರ್ಮಿಸಲು ರೈತರು ಅಡ್ಡಿಪಡಿಸುತ್ತಿರುವ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್, ‘ಈ ಗ್ರಾಮಗಳಲ್ಲಿ ರೈತರಿಗೆ ನೇರವಾಗಿ ಪರಿಹಾರ ವಿತರಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಕುಂದಾಣ ಹೋಬಳಿಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಮತ್ತು ಬೈರದೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 867.37 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅದರಲ್ಲಿ 300 ಎಕರೆಯನ್ನು ಫಾಕ್ಸ್‌ಕಾನ್‌ ಕಂಪನಿಗೆ ಹಂಚಿಕೆ ಮಾಡಲಾಗಿದೆ.

ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಬೇಲಿ ನಿರ್ಮಿಸಲು ತೆರಳಿದ್ದಾಗ ರೈತರು ಅಡ್ಡಿಪಡಿಸಿದ್ದಾರೆ. ಪೊಲೀಸ್‌ ಭದ್ರತೆಯಲ್ಲಿ ಈ ಜಮೀನುಗಳಿಗೆ ಬೇಲಿ ಹಾಕಲಾಗುವುದು ಎಂದು ಮಹೇಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.