ADVERTISEMENT

ಬೆಂಗಳೂರು: ಕಾನೂನು ಮೀರಿ ಭೂ ಪರಿವರ್ತನೆ

ನಗರ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಡಿಸಿ ಅನುಮೋದನೆ ಅಗತ್ಯವಿಲ್ಲ: ಕಾಯ್ದೆ

ಆರ್. ಮಂಜುನಾಥ್
Published 14 ನವೆಂಬರ್ 2024, 23:16 IST
Last Updated 14 ನವೆಂಬರ್ 2024, 23:16 IST
ಕೃಷ್ಣ ಬೈರೇಗೌಡ 
ಕೃಷ್ಣ ಬೈರೇಗೌಡ    

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಅಗತ್ಯವಿಲ್ಲ ಎಂಬ ಸರ್ಕಾರದ ಕಾನೂನನ್ನು ಮೀರಿ ಕೃಷಿ ಜಮೀನುಗಳನ್ನು ಕೃಷಿಯೇತರ ಬಳಕೆಗೆ ಒಂದು ವರ್ಷದಿಂದ ಪರಿವರ್ತನೆ ಮಾಡಲಾಗುತ್ತಿದೆ.

ಸರ್ಕಾರದ ಕಾನೂನನ್ನು ಮುಚ್ಚಿಟ್ಟು, ಅದು ಅನುಷ್ಠಾನಕ್ಕೆ ಬಾರದಂತೆ ‘ಕಾಣದ ಕೈ’ಗಳು ಕಾರ್ಯಭಾರ ನಡೆಸುತ್ತಿವೆ. ಹೀಗಾಗಿ, ಭೂ ಪರಿವರ್ತನೆಗೆ ಮಾಲೀಕರಿಂದ ಅರ್ಜಿಗಳನ್ನು ಜಿಲ್ಲಾಧಿಕಾರಿಯವರು ಸ್ವೀಕರಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವುದರಿಂದ ಭೂಮಾಲೀಕರಿಗೆ ಅನಗತ್ಯ ಆರ್ಥಿಕ ಹೊರೆಯಾಗುತ್ತಿದೆ.

‘ಮಾಸ್ಟರ್‌ ಪ್ಲಾನ್‌’ ವ್ಯಾಪ್ತಿಯಲ್ಲಿರುವ ಕೃಷಿ ಜಮೀನನ್ನು ಕೃಷಿಯೇತರ ಅಗತ್ಯಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಯವರ ಅನುಮತಿಯ ಅಗತ್ಯವಿಲ್ಲ. ಸಂಬಂಧಿಸಿದ ನಗರ ಯೋಜನಾ ಪ್ರಾಧಿಕಾರದಿಂದ ನಿರ್ಮಾಣ ನಕ್ಷೆ ಪಡೆಯುವ ಸಂದರ್ಭದಲ್ಲಿ ನಿಗದಿತ ಸ್ವಯಂ ಘೋಷಣೆಯೊಂದಿಗೆ ಅಗತ್ಯ ಶುಲ್ಕ ಪಾವತಿಸಿದರೆ ಸಾಕು ಎಂದು ಕಂದಾಯ ಇಲಾಖೆ 2023ರಲ್ಲೇ ಆದೇಶ ಹೊರಡಿಸಿದೆ. ಆದರೆ, ಇದನ್ನು ಜಿಲ್ಲಾಧಿಕಾರಿಯವರು ಪಾಲಿಸುತ್ತಿಲ್ಲ.

ADVERTISEMENT

ನಗರ ಪ್ರದೇಶಗಳಲ್ಲಿ ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು, ರಾಜ್ಯಪಾಲರ ಸಮ್ಮತಿಯನ್ನೂ ಪಡೆದು 2023ರ ಜುಲೈ 27ರಂದು ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ –1964ರ ಸೆಕ್ಷನ್‌ 95ಕ್ಕೆ ತಿದ್ದುಪಡಿ ತರಲಾಗಿದ್ದು, ಕೃಷಿ ಅಥವಾ ಇತರೆ ಉದ್ದೇಶಕ್ಕೆ ಬಳಸಲಾಗುತ್ತಿರುವ ಜಮೀನು, ಕರ್ನಾಟಕ ನಗರ ಮತ್ತು ಗ್ರಾಮಾಂತರ (ಕೆಟಿಸಿಪಿ) ಯೋಜನಾ ಕಾಯ್ದೆ 1961ರಂತೆ  ‘ಮಾಸ್ಟರ್‌ ಪ್ಲಾನ್’ನಲ್ಲಿ ವಸತಿ ಅಥವಾ ಇತರೆ ಉದ್ದೇಶಕ್ಕೆಂದು ನಮೂದಾಗಿದ್ದರೆ, ಜಿಲ್ಲಾಧಿಕಾರಿಯವರಿಂದ ಭೂ ಪರಿವರ್ತನೆ ಪ್ರಕ್ರಿಯೆ ಅಗತ್ಯವಿರುವುದಿಲ್ಲ. ಇಂತಹ ಜಮೀನು ಹೊಂದಿರುವವರು ನಗರ ಯೋಜನೆ ಪ್ರಾಧಿಕಾರಕ್ಕೆ ಅಗತ್ಯ ಶುಲ್ಕ ಪಾವತಿಸಬೇಕು ಎಂದು ತಿಳಿಸಲಾಗಿದೆ.

ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಿಂದ ಹೊರಗಿದ್ದು, ಮಾಸ್ಟರ್‌ ಪ್ಲಾನ್‌ನಲ್ಲಿ ಪ್ರಕಟಿಸಲಾಗಿರದ ಜಮೀನು ಅಥವಾ ಕೃಷಿ ಜಮೀನನ್ನು ಪರಿವರ್ತಿಸಲು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಬೇಕು. ಸಂಬಂಧಿಸಿದ ಯೋಜನಾ ಪ್ರಾಧಿಕಾರದ ಸಮ್ಮತಿ ಪಡೆದು, ಶುಲ್ಕ ಪಾವತಿಸಿಕೊಂಡು ಜಿಲ್ಲಾಧಿಕಾರಿಯವರು ಪರಿವರ್ತನೆ ಮಾಡಬಹುದು. 15 ದಿನದಲ್ಲಿ ಯೋಜನಾ ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಅದನ್ನು ಸಮ್ಮತಿ ಎಂದು ಭಾವಿಸಬೇಕು.

ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಜಿಲ್ಲಾಧಿಕಾರಿಯವರು ಅನುಮೋದನೆ ನೀಡದಿದ್ದರೆ, ‘ಪರಿವರ್ತನೆಗೆ ಅನುಮೋದನೆ ನೀಡಲಾಗಿದೆ’ ಎಂದು ಭಾವಿಸಲಾಗುತ್ತದೆ. ನಿಗದಿತ ಶುಲ್ಕ ಪಾವತಿಸಿದ ಕೂಡಲೇ ಜಿಲ್ಲಾಧಿಕಾರಿ ಅದಕ್ಕೆ ಅನುಮೋದನೆ ನೀಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

‘ನಿಯಮ ರೂಪಿಸಿಲ್ಲ’ ‌

‘ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಆದರೆ ರಾಜ್ಯದಾದ್ಯಂತ ಜಾರಿಯಾಗಲು ಅಗತ್ಯವಾದ ನಿಯಮಗಳನ್ನು ಇನ್ನೂ ರೂಪಿಸಿಲ್ಲ. ಹೀಗಾಗಿ ಇಂತಹ ಪರಿವರ್ತನೆಯಾಗದ ಜಮೀನಿಗೆ ಶುಲ್ಕ ಕಟ್ಟಿಸಿಕೊಂಡು ಅಗತ್ಯ ಅನುಮೋದನೆಯನ್ನು ನೀಡಲು ಬಿಬಿಎಂಪಿ ಹಾಗೂ ಬಿಡಿಎಗೆ ಸಾಧ್ಯವಾಗುತ್ತಿಲ್ಲ. ನಿಯಮಗಳನ್ನು ರೂಪಿಸಲು ಕೆಲವು ಜಿಲ್ಲಾಧಿಕಾರಿಗಳೇ ತಡೆಯಾಗಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ‘ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಒತ್ತಾಸೆಯಿಂದಲೇ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಜನಪರವಾದ ಈ ಕಾಯ್ದೆಯ ಅನುಷ್ಠಾನಕ್ಕೆ ಕೆಲವು ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ’ ಎಂದರು. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಪ್ರಯತ್ನಿಸಿತು. ಆದರೆ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ‘ಕಾಯ್ದೆ ರೂಪಿಸಲಾಗಿದೆ. ಆದರೆ ಅನುಷ್ಠಾನವಾಗಿಲ್ಲ’ ಎಂದು ಸಚಿವರ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು.

‘ಸರ್ಕಾರದಿಂದ ನಾಗರಿಕರಿಗೆ ಮೋಸ’

‘ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆಯನ್ನು ಸರಳೀಕರಣ ಮಾಡಲಾಗುತ್ತದೆ ಮತ್ತು ನಾಗರಿಕರಿಗಾಗುತ್ತಿರುವ ತೊಂದರೆ ಕಚೇರಿ ಅಲೆದಾಟವನ್ನು ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಅದನ್ನು ಅನುಷ್ಠಾನಕ್ಕೆ ತರದೆ ಮೋಸ ಮಾಡುತ್ತಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ದೂರಿದರು. ‘ಜಿಲ್ಲಾಧಿಕಾರಿಯವರು ಅಕ್ರಮವಾಗಿ ಭೂಪರಿವರ್ತನೆ ಮಾಡುತ್ತಿದ್ದು ಕಂದಾಯ ಸಚಿವರಿಗೆ ಇದರ ಅರಿವಿದ್ದರೂ ಸುಮ್ಮನಿದ್ದಾರೆ. ಕೂಡಲೇ ಕಾನೂನು ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಬಿಬಿಎಂಪಿ ವ್ಯಾಪ್ತಿಗೆ ಬಂದಿರುವ 110 ಹಳ್ಳಿ ಸೇರಿದಂತೆ ಪುರಸಭೆ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿದ್ದ ಕೃಷಿ ಜಮೀನಿಗೆ ಭೂ ಪರಿವರ್ತನೆ ಅಗತ್ಯವಿಲ್ಲ. ಆದರೂ ಅವುಗಳಿಗೆ ಬಿ–ಖಾತಾ ನೀಡಿ ಸಮಸ್ಯೆಯುಂಟು ಮಾಡಲಾಗುತ್ತಿದೆ. ಜೊತೆಗೆ ಬಿಡಿಎ ಹಾಗೂ ಬಿಬಿಎಂಪಿ ಬರಬಹುದಾದ ವರಮಾನಕ್ಕೂ ತಡೆಯಾಗಿದೆ’ ಎಂದು ಹೇಳಿದರು.

ಪದ್ಮನಾಭ ರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.