ADVERTISEMENT

ಅಳತೆ ಮಾಡಿದ್ದಷ್ಟೂ ಒತ್ತುವರಿ ಹೆಚ್ಚಳ: ಕ್ರಮ ವಹಿಸದ ಬಿಬಿಎಂಪಿ, ಜಿಲ್ಲಾಡಳಿತ

ಪೂರ್ವದಲ್ಲಿ ಇನ್ನೂ ಹೆಚ್ಚಾದ ರಾಜಕಾಲುವೆ ಅತಿಕ್ರಮ; ಕ್ರಮ ವಹಿಸದ ಬಿಬಿಎಂಪಿ, ಜಿಲ್ಲಾಡಳಿತ

Published 19 ಮಾರ್ಚ್ 2023, 20:43 IST
Last Updated 19 ಮಾರ್ಚ್ 2023, 20:43 IST
ರಾಜಕಾಲುವೆ ತೆರವು ಸಾಂದರ್ಭಿಕ ಚಿತ್ರ
ರಾಜಕಾಲುವೆ ತೆರವು ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೂರ್ವ ಮುಳುಗಡೆಗೆ ಕಾರಣವಾದ ರಾಜಕಾಲುವೆ ಒತ್ತುವರಿ ತೆರವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಆದರೆ, ಒತ್ತುವರಿ ಮಾತ್ರ ಅಳತೆ ಮಾಡಿದಂತೆಲ್ಲ ಹೆಚ್ಚಾಗುತ್ತಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ ಮೂರು ಹೋಬಳಿಗಳಲ್ಲಿ 26 ಎಕರೆಗೂ ಹೆಚ್ಚು ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿಯಾಗಿರುವುದು ಹೊಸದಾಗಿ ಅಳತೆ ಮಾಡಿದ ಸಂದರ್ಭದಲ್ಲಿ ತಿಳಿದು ಬಂದಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ನಗರದ ಪೂರ್ವ ತಾಲ್ಲೂಕಿನ ಬಹುತೇಕ ಪ್ರದೇಶಗಳು ಮುಳುಗಿದ್ದವು. ಆಗ ಹಲವು ರೀತಿಯ ಒತ್ತುವರಿಗಳನ್ನು ತೆರವು ಮಾಡುವುದಾಗಿ ಬಿಬಿಎಂಪಿ ಹೇಳಿತ್ತು. ಈ ಕಾರ್ಯ ಕೆಲವು ದಿನ ನಡೆದ ಮೇಲೆ ಎಲ್ಲವೂ ತಣ್ಣಗಾಯಿತು. ಆದರೆ, ಒತ್ತುವರಿಯನ್ನು ಗುರುತಿಸುವುದು, ಅದರ ಪ್ರಮಾಣವನ್ನು ದಾಖಲಿಸುವ ಕಾರ್ಯ ಜನವರಿಯಲ್ಲಿ ಪೂರ್ಣಗೊಂಡಿದೆ. ಕಂದಾಯ ಇಲಾಖೆಗಳ ದಾಖಲೆಯಂತೆ ಹೊಸದಾಗಿ ಈ ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಒತ್ತುವರಿ ಕಂಡು ಬಂದಿದೆ.

ಪೂರ್ವ ತಾಲ್ಲೂಕಿನ ವರ್ತೂರು, ಬಿದರಹಳ್ಳಿ, ಕೆ.ಆರ್‌. ಪುರ ಹೋಬಳಿಯಲ್ಲಿ ರಾಜಕಾಲುವೆ ಒತ್ತುವರಿಯ ಹೊಸ ಪ್ರಕರಣಗಳನ್ನು ಕಂದಾಯ ಇಲಾಖೆ ದಾಖಲಿಸಿದೆ. ರಾಜಕಾಲುವೆಗಳನ್ನು ಅಳತೆ ಮಾಡಿ, ಕಂದಾಯ ದಾಖಲೆಯಂತೆ ಅವುಗಳನ್ನು ಸರ್ವೆ ಮಾಡಿದಾಗ ಒತ್ತುವರಿ ಕಂಡುಬಂದಿವೆ. ಇವುಗಳನ್ನೆಲ್ಲ ಗುರುತಿಸಿ ಎಲ್ಲ ಪ್ರಕ್ರಿಯೆಯನ್ನೂ ಮುಗಿಸಿ ತಹಶೀಲ್ದಾರ್‌ ಅವರ ಆದೇಶಕ್ಕೆ ಇರಿಸಲಾಗಿದೆ.

ADVERTISEMENT

ಮಳೆ ನಿಂತು ಮನೆ, ಬಡಾವಣೆಗಳಿಗೆ ನೀರು ಹರಿಯುವುದು ಕಡಿಮೆಯಾದ ನಂತರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕ್ಷೀಣವಾಗುತ್ತಾ ಬಂದಿತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಲ್ಲ ಆದೇಶ ಬಂದ ಮೇಲೆ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಜನವರಿಯಿಂದ ಗಡುವು ನೀಡುತ್ತಲೇ ಬರುತ್ತಿದ್ದಾರೆ. ಆದರೆ ಯಾವುದೂ ಕಾರ್ಯಗತವಾಗುತ್ತಿಲ್ಲ.

ಹಲವೆಡೆ ಗುರುತಿಸದ ವ್ಯಾಪ್ತಿ: ವರ್ತೂರು ಹೋಬಳಿ ದೊಡ್ಡಕನ್ನಲ್ಲಿಯ ಸರ್ವೆ ನಂ. 112, 114ರಲ್ಲಿ

ಹಿಡುವಳಿದಾರರಿಂದ ‘ಹಳ್ಳ’ ಒತ್ತುವರಿಯಾಗಿದೆ ಎಂದು ಸರ್ವೆ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ವಿಸ್ತೀರ್ಣವನ್ನು ದಾಖಲಿಸಿಲ್ಲ. ಇದೇ ರೀತಿ, ಕರಿಯಮ್ಮನ ಅಗ್ರಹಾರದ ಸರ್ವೆ ನಂ. 7, 8, 9, 11, 12, 13, 14, 15, 16, 17, 18, 19, 21, 22ರಲ್ಲಿ ಹಿಡುವಳಿದಾರರಿಂದ ಒತ್ತುವರಿ ಎಂದು ದಾಖಲಿಸಲಾಗಿದೆ.

ಬಿದರಹಳ್ಳಿ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಸರ್ವೆನಂ. 129 130ರ ನಡುವಿನ 129/1ರ ಪೂರ್ತಿ ಹಳ್ಳದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎಂದು ದಾಖಲಿಸಲಾಗಿದೆ. ಸರ್ವೆ ನಂ. 34, 121, 122ರಲ್ಲಿ ರಸ್ತೆ ಇದೆ ಎಂದಷ್ಟೇ ದಾಖಲಿಸಲಾಗಿದೆ. ಸರ್ವೆಯರ್‌ಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆಲವು ಒತ್ತುವರಿಗಳನ್ನು ಕೈಬಿಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ದಯಾನಂದ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ಬಿಡಬ್ಲ್ಯೂಎಸ್ಎಸ್‌ಬಿಯಿಂದ ಒತ್ತುವರಿ

ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ವತಿಯಿಂದ ವರ್ತೂರಿನಲ್ಲಿ 37 ಗುಂಟೆ ಪ್ರದೇಶವನ್ನು ರಾಜಕಾಲುವೆಯಲ್ಲಿ ಒತ್ತುವರಿ ಮಾಡಿಕೊಂಡಿದೆ. ಅಮಾನಿಬೆಳ್ಳಂದೂರು ಖಾನೆ ಗ್ರಾಮದ ಸರ್ವೆ ನಂ. 292ರಲ್ಲಿ 12ಗುಂಟೆ ಹಾಗೂ ಸರ್ವೆ ನಂ. 293ರಲ್ಲಿ 25ಗುಂಟೆಯನ್ನು
ಬಿಡಬ್ಲ್ಯೂಎಸ್ಎಸ್‌ಬಿ ಒತ್ತುವರಿ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.