ADVERTISEMENT

ಕಟ್ಟಿಗೇನಹಳ್ಳಿ ಭೂಕಬಳಿಕೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಯಲಹಂಕ ತಾಲ್ಲೂಕು ಜಾಲ ಹೋಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 28ರಲ್ಲಿ 13 ಎಕರೆ 07 ಗುಂಟೆ ಸರ್ಕಾರಿ ಜಮೀನು ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ಹಿಂದೆ ಈ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ತೆರವು ಮಾಡಿ ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಗಿತ್ತು. ಅಲ್ಲಿ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಕಾಮಗಾರಿ ನಡೆಯುತ್ತಿದೆ.

‘ಶುಕ್ರವಾರ ಕೆಆರ್‌ಐಡಿಎಲ್‌ ಎಂಜಿನಿಯರ್‌ ಚಂದ್ರಶೇಖರ್‌ ಅವರ ಮೊಬೈಲ್‌ಗೆ ಕರೆಮಾಡಿದ್ದ ಅಪರಿಚಿತರು ಬೆದರಿಕೆ ಹಾಕಿದ್ದರು. ತಡರಾತ್ರಿ 40ರಿಂದ 45 ಮಂದಿ ಸ್ಥಳಕ್ಕೆ ಬಂದು ನಿರ್ಮಾಣ ಹಂತದ ಕಾಂಪೌಂಡ್ ಧ್ವಂಸಗೊಳಿಸಿದ್ದಾರೆ’ ಎಂದು ಯಲಹಂಕ ತಹಶೀಲ್ದಾರ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ADVERTISEMENT

ತಹಶೀಲ್ದಾರ್‌ ದೂರನ್ನು ಆಧರಿಸಿ ಸಾರ್ವಜನಿಕ ಆಸ್ತಿಗಳ ಹಾನಿ ತಡೆ ಕಾಯ್ದೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

‘ಕೆಲವು ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಖಾಸಗಿ ವ್ಯಕ್ತಿಗಳಿಗೆ ಈ ಜಮೀನಿನ ಖಾತೆ ಮಾಡಿಕೊಟ್ಟಿದ್ದರು. ಒತ್ತುವರಿ ತೆರವುಗೊಳಿಸಿ, 18 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಈಗ ಕಾಂಪೌಂಡ್‌ ಧ್ವಂಸಗೊಳಿಸಿ, ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಸರ್ಕಾರ ಜಮೀನು ರಕ್ಷಣೆ ವಿಷಯದಲ್ಲಿ ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದರಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.