ಬೆಂಗಳೂರು: ಅಭಿವೃದ್ಧಿ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿ, ಪರಿಹಾರ ಪಡೆದ 45 ವರ್ಷಗಳ ನಂತರ ಅದರ ಮೇಲೆ ಪುನಃ ಹಕ್ಕು ಸಾಧಿಸಲು ಮುಂದಾಗಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ₹ 27.60 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.
ಈ ಸಂಬಂಧ ಜೀವನಹಳ್ಳಿಯ ಕಾಕ್ಸ್‌ಟೌನ್ ನಿವಾಸಿ ಎ.ರಾಮಮೂರ್ತಿ, ಎ.ಅಶ್ವತ್ಧ ಮೂರ್ತಿ ಮತ್ತು ಕೆ.ಉಮಾಶಂಕರ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ಮೂವರೂ ಅರ್ಜಿದಾರರು ಪ್ರಕರಣದ 138 ಜನ ಪ್ರತಿವಾದಿಗಳಿಗೆ ತಲಾ ₹ 20 ಸಾವಿರದಂತೆ ಒಟ್ಟು 27.60 ಲಕ್ಷ ಮೊತ್ತವನ್ನು ಪಾವತಿಸಬೇಕು’ ಎಂದು ಆದೇಶಿಸಿದೆ.
‘ಭೂಸ್ವಾಧೀನ, ಪುನರ್ವಸತಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ–2013ರ ಕಲಂ 24 (2) ರದ್ದಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಅಡಿ 1980ರಲ್ಲಿ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಆದರೆ, ಈ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದ ಜಮೀನನ್ನು 1978ರ ಜೂನ್ 2ರಂದು ಪ್ರಾಥಮಿಕ ಅಧಿಸೂಚನೆಯ ಮೂಲಕ ವಶಪಡಿಸಿಕೊಳ್ಳಲಾಗಿದೆ. 1980ರಲ್ಲಿ ಕಲಂ 17(1) ಮತ್ತು 19 (1)ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಮೂರನೇ ಅರ್ಜಿದಾರ ಉಮಾಶಂಕರ್ ಅವರ ತಂದೆ ಎ. ಕೃಷ್ಣಮೂರ್ತಿ ಅವರಿಗೆ ಈ ಸಂಬಂಧ ನೋಟಿಸ್ ಸಹ ನೀಡಲಾಗಿದೆ. ಅಂತೆಯೇ, 1990ರ ಮೇ 30ರಂದು ಜಮೀನನ್ನು ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾಗಿದೆ. ಈ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿದ ಮನವಿಯನ್ನು ವಿಭಾಗೀಯ ನ್ಯಾಯಪೀಠವೂ ಈಗಾಗಲೇ ತಿರಸ್ಕರಿಸಿದೆ. ಹೀಗಾಗಿ, ಅರ್ಜಿದಾರರು ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದ್ದಾರೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ನಲವತ್ತು ವರ್ಷಗಳ ಹಿಂದೆಯೇ ಪ್ರಕರಣಕ್ಕೆ ಸಂಬಂಧಿಸಿದ ಜಮೀನನ್ನು ವಶಪಡಿಸಿಕೊಂಡು ಅದನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಇದರಲ್ಲಿ ಲೇ ಔಟ್ ಅಭಿವೃದ್ಧಿಪಡಿಸಿ, ತಳಸಮುದಾಯಕ್ಕೆ ಸೇರಿದ 138 ಅರ್ಹರಿಗೆ ಇಲ್ಲಿ ನಿವೇಶನ ಅಥವಾ ಮನೆ ಹಂಚಿಕೆ ಮಾಡಲಾಗಿದೆ. ಫಲಾನುಭವಿಗಳಿಗೆ ಮೊದಲನೇ ಅರ್ಜಿದಾರ ಎ.ರಾಮಮೂರ್ತಿ ನಿವೇಶನ ಹಂಚಿಕೆ ಮಾಡಿರುವ ಪತ್ರವನ್ನೂ ಈ ಅರ್ಜಿಯಲ್ಲಿ ಲಗತ್ತಿಸಲಾಗಿದೆ. ಹೀಗಿರುವಾಗ 45 ವರ್ಷಗಳ ಬಳಿಕ 2017ರ ಫೆಬ್ರುವರಿ 3ರಂದು ಪುನಃ ಹೊಸದಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಧೋರಣೆ ಸಕಾರಣಗಳಿಂದ ಹೊರತಾಗಿದೆ’ ಎಂದು ದಂಡಕ್ಕೆ ಕಾರಣ ನೀಡಿದೆ.
‘ಅರ್ಜಿದಾರರು ಆದೇಶ ಹೊರಬಿದ್ದ ಆರು ವಾರಗಳ ಒಳಗಾಗಿ ದಂಡ ಪಾವತಿಸಬೇಕು. ತಡವಾದಲ್ಲಿ ವಾರಕ್ಕೆ ಒಂದು ಸಾವಿರ ರೂಪಾಯಿಯಂತೆ ಹೆಚ್ಚುವರಿ ದಂಡ ತೆರಬೇಕಾಗುತ್ತದೆ’ ಎಂದೂ ನ್ಯಾಯಪೀಠ ತಾಕೀತು ಮಾಡಿದೆ. ಬಿಡಿಎ ಪರವಾಗಿ ಆರ್.ಶ್ರೀಧರ ಹೆಗಡೆ ವಾದ
ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.